
ಮಂಗಳೂರು: ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ಅಡ್ಯಾರು ಗ್ರಾಮ ಪಂಚಾಯತ್ಗಳ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಹಾಗೂ ಗೃಹ ಜ್ಯೋತಿ ಫಲಾನುಭವಿಗಳ ಶಿಬಿರವು ಸೋಮವಾರ ದಿನಾಂಕ 10-08-2026 ರಂದುಅಡ್ಯಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕೆಪಿಸಿಸಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ವನಮಹೋತ್ಸವಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, “ವನಮಹೋತ್ಸವ ಎಂದರೆ ನನಗೆ ಪ್ರೀತಿಯ ವಿಷಯ. ಗಿಡಗಳನ್ನು ನೆಡುವುದು ನನಗೆ ತುಂಬಾ ಸಂತಸದ ಸಂಗತಿ. ನಮ್ಮ ತೋಟದಲ್ಲಿಈಗಾಗಲೇ ವಿವಿಧ ಜಾತಿಯ ಸುಮಾರು 2,000 ಗಿಡಗಳನ್ನು ನೆಟ್ಟಿದ್ದೇನೆ” ಎಂದು ಸಂತಸ ವ್ಯಕ್ತಪಡಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿವೆ ಎಂದ ಅವರು. ಸರ್ಕಾರದ ಹಣ ಕೇವಲ ಉಳ್ಳವರ ಪಾಲಾಗದೆ ಬಡವರಿಗೂ ತಲುಪಬೇಕು ಎಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಯಾವುದೇ ಲಂಚದ ವ್ಯವಹಾರಕ್ಕೆ ಅವಕಾಶವಿಲ್ಲದೆ, ಅನುದಾನವು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುವ ವ್ಯವಸ್ಥೆ ಈ ಯೋಜನೆಗಳ ವಿಶೇಷತೆಯಾಗಿದೆ ಎಂದು ತಿಳಿಸಿದರು.
ಇದೇ ವೇಳೆ, ಭಾರತ್ ಜೋಡೋ ಯುವ ಸಂಘಟನೆಗಳ ರಚನೆಗೆ ಸರ್ಕಾರ ಉತ್ತೇಜನ ನೀಡುತ್ತಿದ್ದು, ಕ್ರೀಡೆ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿಯೊಂದು ಸಂಘಟನೆಗೆ ₹10 ಲಕ್ಷ ಅನುದಾನವನ್ನು ಸರ್ಕಾರ ವ್ಯಯಿಸಲಿದೆ. ಯುವಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಇನಾಯತ್ ಅಲಿ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುಮಾರ್ ಹೊಳ್ಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಂದ್ರ ಬಿ. ಕಂಬಳಿ, ಆಡಳಿತಾಧಿಕಾರಿ ಶಿವಣ್ಣ, ಮೆಸ್ಕಾಂ ಇಲಾಖೆಯ ಎಇಇ ಸತೀಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ ಅಸಫ್ ಹಾಗೂ ಮಂಗಳೂರು ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ರಫೀಕ್, ನವಾಜ್, ನೀತು, ಜಯಂತಿ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.
ರಾಜ್ ಕುಮಾರ್ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.