ಕಾಫಿಗುಡ್ಡೆ: ಮಳೆಯಿಂದ ಮನೆಗೆ ಹಾನಿ, ಸ್ಥಳಕ್ಕೆ ಭೇಟಿಕೊಟ್ಟು ವೈಯಕ್ತಿಕ ನೆರವು ನೀಡಿದ ಇನಾಯತ್ ಅಲಿ!


ಮಂಗಳೂರು:
ಇತ್ತೀಚೆಗೆ ಪ್ರಾಕೃತಿಕ ವಿಕೋಪದಿಂದಾಗಿ ಮನೆಗೆ ಹಾನಿಯಾಗಿ ತೀವ್ರ ಸಮಸ್ಯೆ ಅನುಭವಿಸುತ್ತಿರುವ ಆಕಾಶಭವನ ಕಾಪಿಗುಡ್ಡೆ ನಿವಾಸಿ ಭವಾನಿ ಅವರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಟುಂಬಕ್ಕೆ ಧೈರ್ಯ ತುಂಬಿದರಲ್ಲದೆ ವಯಕ್ತಿಕವಾಗಿ ಧನಸಹಾಯ ವಿತರಿಸಿದರು.

ಈ ಬಾರಿಯ ಮೊದಲ ಮಳೆಗೆ ಆಕಾಶಭವನದ ಕಾಪಿಗುಡ್ಡೆ ನಿವಾಸಿ ಭವಾನಿ ಎಂಬವರ ಮನೆ ಹಾನಿಗೀಡಾಗಿದೆ. ಈ ಮನೆಯಲ್ಲಿ ಭವಾನಿ ಮತ್ತವರ ಮೊಮ್ಮಗಳು ಮಾತ್ರ ವಾಸಿಸುತ್ತಿದ್ದು ಮನೆಯ ಹಲವು ಭಾಗಕ್ಕೆ ಹಾನಿಯಾದ ಹಿನ್ನೆಲೆಯಲ್ಲಿ ಸರಿ ಇರುವ ಒಂದು ಕೋಣೆಯಲ್ಲಿ ದಿನ ಕಳೆಯುವಂತಾಗಿದೆ. ಅಸೌಖ್ಯದಿಂದಾಗಿ ೩ ತಿಂಗಳು ಆಸ್ಪತ್ರೆಯಲ್ಲಿದ್ದ ಭವಾನಿ ಅವರು ಮಗಳ ಮನೆಯಲ್ಲಿ ಸ್ವಲ್ಪ ದಿನ ಇದ್ದು ಇಲ್ಲಿಗೆ ಬಂದಾಗ ಮನೆ ಹಾನಿಗೀಡಾಗಿದೆ. ಈ ಪರಿಸ್ಥಿತಿಯಲ್ಲಿ ಮನೆ ಬಿಟ್ಟು ಹೋಗುವಂತಿಲ್ಲ, ಹಾನಿಗೀಡಾದ ಮನೆಯಲ್ಲಿ ಇರುವಂತೆಯೂ ಇಲ್ಲ ಎಂಬಂತಾಗಿದೆ. ಪಾಲಿಕೆ ಅಧಿಕಾರಿಗಳು ಪರಿಶೀಲಿಸಿ ತೆರಳಿದ್ದಾರೆ. ಆದರೆ ಸರಕಾರದಿಂದ ನೆರವು ಮಾತ್ರ ಲಭಿಸಿಲ್ಲ. ಈ ಕುರಿತು ತಿಳಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಶನಿವಾರ ಭವಾನಿ ಅವರ ಮನೆಗೆ ತೆರಳಿ ಪರಿಶೀಲಿಸಿದರಲ್ಲದೆ ವಯಕ್ತಿಕ ನೆಲೆಯಲ್ಲಿ 50 ಸಾವಿರ ರೂಪಾಯಿ ನೆರವನ್ನು ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಇನಾಯತ್ ಅಲಿ ಅವರು ಸರ್ಕಾರದ ವತಿಯಿಂದ ನೆರವು ಒದಗಿಸಲು ಶ್ರಮಿಸುವೆ. ಈ ಅಶಕ್ತ ಕುಟುಂಬಕ್ಕೆ ಆಕಾಶಭವನ ಶಕ್ತಿ ಫ್ರೆಂಡ್ಸ್ ಮನೆ ನಿರ್ಮಿಸಿಕೊಡಲು ಮುಂದಾಗಿದ್ದು ಆ ಕಾರ್ಯಕ್ಕೂ ನನ್ನಿಂದಾದ ನೆರವನ್ನು ನೀಡುತ್ತೇನೆ ಎಂದರು.

ಮಾಜಿ ಕಾರ್ಪೋರೇಟರ್ ದೀಪಕ್ ಪೂಜಾರಿ, ಶಕ್ತಿ ಫ್ರೆಂಡ್ಸ್ ಅಧ್ಯಕ್ಷ ರೋಹಿತ್, ಪ್ರಮೀಳಾ ಈಶ್ವರ್ ಮತ್ತು ಶಕ್ತಿ ಫ್ರೆಂಡ್ಸ್ ಪದಾಧಿಕಾರಿಗಳು ಈ ಸಂದರ್ಭ ಸ್ಥಳದಲ್ಲಿದ್ದರು.

error: Content is protected !!