ಸರ್ಕಾರಿ ಆಸ್ಪತ್ರೆಗಳ ಡಿಜಿಟಲೀಕರಣಕ್ಕೆ ವೇಗ; ಆರೋಗ್ಯ ಸೇವೆಯಲ್ಲಿ ಮಹತ್ವದ ಬದಲಾವಣೆ: ಯು.ಟಿ.ಖಾದರ್

ಮಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮತ್ತು ಪಾರದರ್ಶಕವಾಗಿ ರೂಪಿಸುವ ಉದ್ದೇಶದಿಂದ ಆರೋಗ್ಯ ಇಲಾಖೆಯಲ್ಲಿ ವ್ಯಾಪಕ ಡಿಜಿಟಲೀಕರಣಕ್ಕೆ ಚಾಲನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ), ಸಮುದಾಯ ಆರೋಗ್ಯ ಕೇಂದ್ರಗಳು (ಸಿಎಚ್‌ಸಿ), ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ಹಂತ ಹಂತವಾಗಿ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಪ್ರಸ್ತುತ ಸುಮಾರು 40 ಆಸ್ಪತ್ರೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿರುವ ಪೇಪರ್‌ಲೆಸ್ ವ್ಯವಸ್ಥೆಯನ್ನು ಶೀಘ್ರದಲ್ಲೇ 183 ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳು ಮತ್ತು ಸಿಎಚ್‌ಸಿಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದರು.

ಡಿಜಿಟಲೀಕರಣದ ಮೂಲಕ ರೋಗಿಗಳ ಸಂಪೂರ್ಣ ವೈದ್ಯಕೀಯ ಮಾಹಿತಿ ಒಂದೇ ವೇದಿಕೆಯಲ್ಲಿ ಲಭ್ಯವಾಗಲಿದ್ದು, ಹಿಂದಿನ ಚಿಕಿತ್ಸೆ, ರಕ್ತದೊತ್ತಡ, ಸಕ್ಕರೆ ಪ್ರಮಾಣ ಸೇರಿದಂತೆ ಆರೋಗ್ಯದ ವಿವರಗಳನ್ನು ವೈದ್ಯರು ತಕ್ಷಣ ಪರಿಶೀಲಿಸಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ. ಮುಂದಿನ ಹಂತದಲ್ಲಿ ಈ ವ್ಯವಸ್ಥೆಯನ್ನು ಖಾಸಗಿ ಆಸ್ಪತ್ರೆಗಳಿಗೂ ಸಂಪರ್ಕಿಸಿ, ರೋಗಿಯ ಅನುಮತಿಯೊಂದಿಗೆ ಎಲ್ಲೆಡೆ ವೈದ್ಯಕೀಯ ಮಾಹಿತಿ ಪಡೆಯುವ ವ್ಯವಸ್ಥೆ ಜಾರಿಗೊಳಿಸುವ ಉದ್ದೇಶವಿದೆ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಗೆ ಚಿಕಿತ್ಸೆ ವೆಚ್ಚದ ವಿವರವನ್ನು ಒಳಗೊಂಡ ಬಿಲ್ ನೀಡಲಾಗುವುದು. ಆದರೆ ಆ ಬಿಲ್‌ಗೆ ಯಾವುದೇ ಹಣ ಪಾವತಿಸುವ ಅಗತ್ಯವಿಲ್ಲ. ಸರ್ಕಾರವೇ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸಲಿದ್ದು, ಚಿಕಿತ್ಸೆಗೆ ಸರ್ಕಾರ ಎಷ್ಟು ವೆಚ್ಚ ಮಾಡಿದೆ ಎಂಬ ಮಾಹಿತಿ ಮಾತ್ರ ರೋಗಿಗೆ ತಿಳಿಯಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 24 ಗಂಟೆಗಳ ತೀವ್ರ ನಿಗಾ ಘಟಕ (ಐಸಿಯು), ಮಕ್ಕಳ ತುರ್ತು ಚಿಕಿತ್ಸಾ ವಿಭಾಗ ಹಾಗೂ ನವಜಾತ ಶಿಶುಗಳ ವಿಶೇಷ ಆರೈಕೆ ಘಟಕಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ತಾಲೂಕು ಮಟ್ಟದಲ್ಲೇ ಉತ್ತಮ ಚಿಕಿತ್ಸೆ ದೊರೆಯಲಿದ್ದು, ಜಿಲ್ಲಾ ಅಥವಾ ಖಾಸಗಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.

ಆಯುಷ್ ಆಸ್ಪತ್ರೆಗಳನ್ನೂ ಹಂತ ಹಂತವಾಗಿ ಡಿಜಿಟಲ್ ಆರೋಗ್ಯ ವ್ಯವಸ್ಥೆಗೆ ಒಳಪಡಿಸಲಾಗುವುದು. ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳ ಹೊಸ ಕಟ್ಟಡಗಳ ನಿರ್ಮಾಣದ ವೇಳೆ ಅದೇ ಯೋಜನೆಯಡಿ ಆಯುಷ್ ಆಸ್ಪತ್ರೆಗಳಿಗೂ ಪ್ರತ್ಯೇಕ ಕಟ್ಟಡ ನಿರ್ಮಿಸಿ, ಒಂದೇ ಆವರಣದಲ್ಲಿ ಅಲೋಪತಿ ಹಾಗೂ ಆಯುಷ್ ಚಿಕಿತ್ಸಾ ಸೇವೆಗಳನ್ನು ಒದಗಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಹೋಟೆಲ್ ಹಾಗೂ ಉಪಾಹಾರ ಗೃಹಗಳಲ್ಲಿ ಗ್ರಾಹಕರಿಗೆ ಬಿಸಿ ಕುಡಿಯುವ ನೀರು ಒದಗಿಸುವ ಕುರಿತು ಅಗತ್ಯ ನಿರ್ದೇಶನ ನೀಡಲಾಗುವುದು. ಅಜಿನೊಮೋಟೊ, ಕೃತಕ ಬಣ್ಣ ಸೇರಿದಂತೆ ಆರೋಗ್ಯಕ್ಕೆ ಹಾನಿಕಾರಕ ಪದಾರ್ಥಗಳ ಬಳಕೆ ಪತ್ತೆಯಾದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಆಹಾರ ಸುರಕ್ಷತಾ ಮಾನದಂಡಗಳನ್ನು ಇನ್ನಷ್ಟು ಬಲಪಡಿಸಲು ನಿರಂತರ ತಪಾಸಣೆ ನಡೆಸಲಾಗುತ್ತಿದ್ದು, ಗುಣಮಟ್ಟದ ಆಹಾರವೇ ಸಾರ್ವಜನಿಕರಿಗೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ್ ಹೇಳಿದರು.

error: Content is protected !!