“ಸಂಘಟನ್ ಸೃಜನ್” ಅಭಿಯಾನ: ತಳಮಟ್ಟದಿಂದ ಪಕ್ಷ ಬಲಪಡಿಸಲು ಕಾಂಗ್ರೆಸ್ ಹೆಜ್ಜೆ – ಎಐಸಿಸಿ ವೀಕ್ಷಕ ಜಯಂತ್

ಸುರತ್ಕಲ್: ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಪಾರದರ್ಶಕ ಹೆಜ್ಜೆ ಇಟ್ಟಿದೆ ಎಂದು ಎಐಸಿಸಿ ವೀಕ್ಷಕರು ಹಾಗೂ ಕೇರಳ ಶಾಸಕ ಜಯಂತ್ ಹೇಳಿದರು.

ಸುರತ್ಕಲ್‌ನ ಚೊಕ್ಕಬೆಟ್ಟು ಕ್ರಾಸ್ ಬಳಿ ‘ಸಂಘಟನ್ ಸೃಜನ್ ಅಭಿಯಾನ’ದ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, “2013ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಕಂಡ ವಿಜಯದ ವೈಭವವನ್ನು ಮರಳಿ ತರಬೇಕಿದೆ. ಜಿಲ್ಲೆಯ ಎಂಟು ಕ್ಷೇತ್ರಗಳು, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್‌ಗಳಲ್ಲಿ ಪಕ್ಷ ಅಧಿಕಾರಕ್ಕೆ ಏರಬೇಕು.

ಈ ಗುರಿ ಸಾಧನೆಗೆ ಸ್ಥಳೀಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವವರು ಸಮರ್ಥರಾಗಿರಬೇಕು. ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಈ ಅಭಿಯಾನ ನಿರ್ಣಾಯಕ ಪಾತ್ರ ವಹಿಸಲಿದೆ. ಬಿಜೆಪಿ ಜನವಿರೋಧಿ ನೀತಿಯಿಂದ ತಿರಸ್ಕರಿಸಲ್ಪಡುತ್ತಿದೆ. ದೆಹಲಿಯಲ್ಲಿ ನಡೆದ ವಿದ್ಯಾರ್ಥಿ ರ್ಯಾಲಿಯೇ ಇದಕ್ಕೆ ಸಾಕ್ಷಿ.

ಕಾಂಗ್ರೆಸ್ ಮುಕ್ತ ಭಾರತದ ಕನಸು ಕಂಡಿದ್ದ ಬಿಜೆಪಿ ಇಂದು ತಾನೇ ಅಧಃಪತನಕ್ಕೆ ಹೋಗುತ್ತಿದೆ. ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆ ಇದೀಗ ಫಲ ನೀಡುತ್ತಿದೆ” ಎಂದು ತಿಳಿಸಿದರು.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಸಮಿತಿ ಸದಸ್ಯ ಸತೀಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಸದಾಶಿವ, ವೆರೋನಿಕ ಕರ್ನೇಲಿಯೋ, ಯುವ ಕಾಂಗ್ರೆಸ್ ನವಾಜ್, ಮಾಜಿ ಕಾರ್ಪೊರೇಟರ್ ಅನಿಲ್ ಕುಮಾರ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ್ ಚಿತ್ರಾಪುರ ಸೇರಿದಂತೆ ವಿವಿಧ ಸಮಿತಿಯ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!