
ಮಂಗಳೂರು: ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕುರಿತು ಬಳಸಿರುವ ಭಾಷೆ ಮತ್ತು ಮಾಡಿರುವ ವೈಯಕ್ತಿಕ ಆರೋಪಗಳು ಅತ್ಯಂತ ಖಂಡನೀಯ, ಬೇಜವಾಬ್ದಾರಿಯುತ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ದವಾಗಿವೆ ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಯಾವುದೇ ಸಾಕ್ಷ್ಯಾಧಾರವಿಲ್ಲದೆ ವ್ಯಕ್ತಿಯ ಘನತೆಗೆ ಧಕ್ಕೆ ತರುವ ಆರೋಪಗಳನ್ನು ಮಾಡುವುದು ರಾಜಕೀಯ ಸಂಸ್ಕೃತಿಯಲ್ಲ. ದೇಶದ ಪ್ರಮುಖ ನಾಯಕರ ವಿರುದ್ಧ ವೈಯಕ್ತಿಕ ನಿಂದನೆಗಳನ್ನು ಮಾಡುವ ಬದಲು, ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ.
ಅದಕ್ಕಿಂತಲೂ ಆತಂಕಕಾರಿ ಸಂಗತಿಯೆಂದರೆ ಯಶ್‌ಪಾಲ್ ಸುವರ್ಣ ಅವರು ಮಾಡಿದರೆಂದು ವರದಿಯಾಗಿರುವ “ರಾಹುಲ್ ಗಾಂಧಿ ಅವರ ಕುಟುಂಬವನ್ನು ಬಾಬರಿ ಮಸೀದಿ ಧ್ವಂಸ ಮಾಡಿದಂತೆ ಧ್ವಂಸ ಮಾಡುತ್ತೇವೆ” ಎಂಬ ರೀತಿಯ ಹೇಳಿಕೆ. ಇಂತಹ ಭಾಷೆ ರಾಜಕೀಯ ಭಿನ್ನಾಭಿಪ್ರಾಯವಲ್ಲ; ಅದು ದ್ವೇಷ, ಪ್ರಚೋದನೆ ಮತ್ತು ಪ್ರಜಾಪ್ರಭುತ್ವದ ಸಂಸ್ಕೃತಿಗೆ ವಿರುದ್ಧವಾದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಇರಬಹುದು, ಆದರೆ ಬೆದರಿಕೆ ಅಥವಾ ಹಿಂಸೆಯನ್ನು ಸೂಚಿಸುವ ಮಾತುಗಳಿಗೆ ಯಾವುದೇ ಸ್ಥಾನವಿಲ್ಲ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇಂತಹ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತದೆ. ಯಶ್‌ಪಾಲ್ ಸುವರ್ಣ ಅವರು ತಮ್ಮ ಮಾತುಗಳನ್ನು ಹಿಂತೆಗೆದುಕೊಂಡು ದೇಶದ ಜನರ ಕ್ಷಮೆ ಕೇಳಬೇಕು. ಸಂಬಂಧಪಟ್ಟ ಅಧಿಕಾರಿಗಳು ಇಂತಹ ಹೇಳಿಕೆಗಳ ಕುರಿತು ಕಾನೂನುಬದ್ಧವಾಗಿ ಪರಿಶೀಲನೆ ನಡೆಸಬೇಕೆಂದು ನಾವು ಆಗ್ರಹಿಸುತ್ತೇವೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸತ್ಯ, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸೌಹಾರ್ದತೆಯ ಪರವಾಗಿ ತನ್ನ ಹೋರಾಟವನ್ನು ಎಂದಿನಂತೆ ಮುಂದುವರಿಸಲಿದೆ. ವೈಯಕ್ತಿಕ ನಿಂದನೆ, ಬೆದರಿಕೆ ಮತ್ತು ದ್ವೇಷದ ರಾಜಕಾರಣಕ್ಕೆ ನಾವು ಎಂದಿಗೂ ಮಣಿಯುವುದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಪ್ಪಿ, ಶಾಂತಲಾ ಗಟ್ಟಿ, ವೀಣಾ, ಚಂದ್ರಕಲಾ, ವೃಂದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.