“5 ಕೋಟಿ ಕೊಟ್ಟರೆ ಕಾಂಗ್ರೆಸ್ ಎಂ.ಎಲ್.ಸಿ. ಮಾಡ್ತೇನೆ!“ ಒಂದೂವರೆ ಕೋಟಿ ಕೊಟ್ಟ ಮಂಗಳೂರಿನ ಸಮಾಜಸೇವಕಿಗೆ ಕೊನೆಗೆ ಆಗಿದ್ದೇನು!?

ಮಂಗಳೂರು: ವಿಧಾನಪರಿಷತ್ ಸದಸ್ಯೆಯನ್ನಾಗಿ ಮಾಡಲು ಸ್ವಲ್ಪ ಖರ್ಚು ಮಾಡಬೇಕು ಎಂದು ನಂಬಿಸಿದ ಖತರ್ನಾಕ್ ಆಸಾಮಿಯೊಬ್ಬ ಮಂಗಳೂರು ಮೂಲದ ಮಹಿಳೆಯಿಂದ 1.50 ಕೋಟಿ ರೂ. ಪಡೆದು ವಂಚನೆ ಎಸಗಿರುವ ಕುರಿತು ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯು ಖಾಸಗಿ ಟ್ರಸ್ಟ್ ಒಂದರ ಕ್ಯಾನ್ಸರ್ ಅಭಿಯಾನದಲ್ಲಿ ತೊಡಗಿಕೊಂಡಿದ್ದು ಯರಿಸ್ವಾಮಿ ಎಂಬಾತನ ಪರಿಚಯವಾಗಿತ್ತು. ತಾನು ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ ಎಂದು ಹೇಳಿಕೊಂಡಿದ್ದ ಯರಿಸ್ವಾಮಿ ನೀವು 5 ಕೋಟಿ ಕೊಟ್ಟರೆ ಎಂ ಎಲ್ ಸಿ ಮಾಡುಡುತ್ತೇನೆ” ಎಂದು ಹೇಳಿದ್ದ. ಅಷ್ಟು ಹಣ ಇಲ್ಲ ಎಂದಾಗ 1.50 ಕೋಟಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಹೀಗೇ ಹಣವನ್ನು ವಿವಿಧ ಕಡೆಗಳಲ್ಲಿ ಆರೋಪಿ ಕೈಗೆ ಮಹಿಳೆ ಹಸ್ತಾಂತರ ಮಾಡಿದ್ದರು. ಕೊನೆಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಸುವುದಾಗಿ ಹೇಳಿ ಮಹಿಳೆಯನ್ನು ದೆಹಲಿಗೆ ಕರೆದೊಯ್ದಿದ್ದ ಯರಿಸ್ವಾಮಿ ಅಲ್ಲಿ ಆಕೆ ತಂಗಿದ್ದ ಹೋಟೆಲ್ ರೂಮ್ ಗೆ ಹೋಗಿ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದು ಮಹಿಳೆ ರೂಮಿನಿಂದ ಹೊರಬಂದು ಆತನಿಂದ ತಪ್ಪಿಸಿಕೊಂಡಿದ್ದರು ಎನ್ನಲಾಗಿದೆ.
ಹಣ ವಾಪಾಸ್ ಕೊಡುವಂತೆ ಹೇಳಿದಾಗ ಆರೋಪಿ ಕೊಲೆ ಬೆದರಿಕೆ ಹಾಕಿದ್ದಾಗಿ ಆರೋಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

error: Content is protected !!