
ಬೆಂಗಳೂರು: ನಗರದ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆಹಳ್ಳಿ ಎಂಬಲ್ಲಿ ಮೂರು ತಿಂಗಳ ಹಿಂದೆ ನಡೆದಿದ್ದ ಬಾಲಕಿಯ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ತಡವಾಗಿ ಕೊಲೆ ಕೇಸ್ ದಾಖಲಾಗಿದೆ.
ಬೆಂಗಳೂರು ಮೂಲದ ಪ್ರಿಯಾಂಕಾ ಹಾಗೂ ದಾವಣಗೆರೆಯ ಪ್ರವೀಣ್ 2007 ರಲ್ಲಿ ಮದುವೆಯಾಗಿದ್ದು ದಂಪತಿಗೆ 17 ವರ್ಷದ ಹಾಗೂ 5 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದರು. ಈ ನಡುವೆ ಕೆಲ ವರ್ಷಗಳ ಹಿಂದೆ ಪ್ರಿಯಾಂಕಾಳಿಗೆ ತನ್ನ ಕಾಲೇಜು ಗೆಳೆಯ ಮೋಹನ್ ಜೊತೆ ಸಲುಗೆ ಬೆಳೆದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಈ ವಿಷಯ ಪ್ರಿಯಾಂಕಾ ಪತಿ ಪ್ರವೀಣ್ ಕಿವಿಗೆ ಬಿದ್ದಿದ್ದು ಪ್ರಶ್ನಿಸಿದಾಗ ಪ್ರಿಯಾಂಕಾ ತನಗೆ ಡಿವೋರ್ಸ್ ಕೊಡುವಂತೆ ಪಟ್ಟು ಹಿಡಿದಿದ್ದಳು ಎನ್ನಲಾಗಿದೆ.
ದಂಪತಿ ಮೃತಪಟ್ಟಿರುವ ಮಗುವಿನೊಂದಿಗೆ ಕಾಡುಗೋಡಿಯಲ್ಲಿ ವಾಸವಾಗಿದ್ದರು. ಮಾ.24ರಂದು ಮಗು ಏಕಾಏಕಿ ಮೃತಪಟ್ಟಿದ್ದು ಏನಾಯ್ತು ಎಂದು ಕೇಳಿದಾಗ ಮಗುವಿಗೆ ಬಿರಿಯಾನಿ ತಿನ್ನಲು ಕೊಟ್ಟಿದ್ದೆ. ಆಮೇಲೆ ಏನಾಯ್ತೋ ಗೊತ್ತಿಲ್ಲ ಎಂದಿದ್ದಾಳೆ. ಮತ್ತೊಮ್ಮೆ ಐಸ್ ಕ್ರೀಮ್ ಕೊಟ್ಟು ಎಸಿ ಹಾಕಿ ಕಾರಿನಲ್ಲಿ ಮಲಗಿಸಿದ್ದೆ, ಆದರೆ ಮನೆಗೆ ಬಂದು ನೋಡಿದಾಗ ಮಗು ಸತ್ತುಹೋಗಿತ್ತು ಎಂದು ಹೇಳಿದ್ದಳು.
ಈ ಬಗ್ಗೆ ಸಂಶಯಪಟ್ಟಿದ್ದ ಪತಿ ಪ್ರವೀಣ್ ಮಗುವಿನ ಮರಣೋತ್ತರ ಪರೀಕ್ಷೆ ವರದಿಯನ್ನ ತನ್ನ ಸಂಬಂಧಿ ವೈದ್ಯರೊಬ್ಬರಿಗೆ ಕಳುಹಿಸಿದ್ದರು. ವಿದೇಶದಲ್ಲಿದ್ದ ವೈದ್ಯರು ಐಸ್ ಕ್ರೀಮ್ ಅಥವಾ ಬಿರಿಯಾನಿ ತಿಂದು ಮಗು ಸತ್ತಿಲ್ಲ ಎಂದು ಹೇಳಿದ್ದಾರೆ. ಪ್ರವೀಣ್ ನನ್ನ ಮಗಳನ್ನು ಉಸಿರು ಗಟ್ಟಿಸಿ ಕೊಲ್ಲಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಿಯಾಂಕಾಳ ಗೆಳೆಯ ಮೋಹನ್‌ನನ್ನ ಬಂಧಿಸಿದ್ದಾರೆ. ನಾಪತ್ತೆಯಾಗಿರುವ ಪ್ರಿಯಾಂಕಾಳಿಗಾಗಿ ಶೋಧ ಮುಂದುವರಿದಿದೆ.
