ಬಂಟ್ವಾಳ: 7.64 ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾದಕ ದ್ರವ್ಯ ಸಹಿತ ಮೂವರು ಡ್ರಗ್ ಪೆಡ್ಲರ್‌ಗಳ ಬಂಧನ


ಮಂಗಳೂರು: ಕಾರಿನಲ್ಲಿ ಅಕ್ರಮವಾಗಿ ಎಂಡಿಎಂಎ (MDMA) ಮಾದಕ ದ್ರವ್ಯವನ್ನು ಸಾಗಾಟ ಮಾಡುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಬಂಟ್ವಾಳ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಬರೋಬ್ಬರಿ 7,64,000 ರೂಪಾಯಿ ಮೌಲ್ಯದ ನಿಷೇಧಿತ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ಪುದು ನಿವಾಸಿ 39 ವರ್ಷ ಪ್ರಾಯದ ಎ. ಜುಬೈರ್, ಸಜಿಪ ಮುನ್ನೂರು ನಿವಾಸಿ 36 ವರ್ಷ ಪ್ರಾಯದ ಮೊಹಮ್ಮದ್ ಸವಾದ್ ಹಾಗೂ ಬಿ. ಮೂಡ ನಿವಾಸಿ ಬಿ.ಎಮ್. ರಶೀದ್ ಯಾನೆ ಮಾರಿಮುತ್ತು ಬಂಧಿತ ಆರೋಪಿಗಳಾಗಿದ್ದಾರೆ.
ಜೂನ್ 4ರಂದು ಗುರುವಾರ ಸಂಜೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸಂದೀಪ್‌ ಕುಮಾರ್‌ ಶೆಟ್ಟಿ ಹಾಗೂ ಸಿಬ್ಬಂದಿಗಳ ತಂಡ ಮೆಲ್ಕಾರ್ ಫ್ಲೈಒವರ್ ಬಳಿ ವಾಹನ ತಪಾಸಣೆ ನಡೆಸುತ್ತಿತ್ತು. ಈ ವೇಳೆ ಸಂಶಯಾಸ್ಪದವಾಗಿ ಬಂದ KA 19 MR 1997 ನೋಂದಣಿಯ ಕಾರನ್ನು ತಡೆದು ನಿಲ್ಲಿಸಿ ಪೊಲೀಸರು ಪರಿಶೀಲಿಸಿದ್ದಾರೆ.
ಕಾರನ್ನು ಕೂಲಂಕಷವಾಗಿ ತಪಾಸಣೆ ನಡೆಸಿದಾಗ ಡ್ರಗ್ಸ್ ಸೇವನೆಗೆ ಬಳಸುವ ವಿಶಿಷ್ಟ ಸಾಧನ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡು ಕಾರಿನಲ್ಲಿದ್ದ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಮಾದಕ ದ್ರವ್ಯ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ 76 ಗ್ರಾಂ 40 ಮಿಲಿಗ್ರಾಂ ಎಂಡಿಎಂಎ (ಮೌಲ್ಯ ಸುಮಾರು ₹7,64,000, ಕೃತ್ಯಕ್ಕೆ ಬಳಸಿದ ಕಾರು, ಆರೋಪಿಗಳ ಬಳಿಯಿದ್ದ 3 ಮೊಬೈಲ್ ಫೋನ್‌ಗಳು ಮತ್ತು ಡ್ರಗ್ಸ್ ಸೇವನೆಯ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಜಾಲದ ಹಿಂದಿರುವ ಇತರರ ಪತ್ತೆಗಾಗಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

error: Content is protected !!