
ಚೆನ್ನೈ: ಅಣ್ಣಾಮಲೈ ನಿನ್ನೆಯಷ್ಟೇ ಬಿಜೆಪಿ ಪಕ್ಷವನ್ನು ತೊರೆದಿದ್ದು ಹೊಸದಾಗಿ ಪ್ರಾರಂಭಿಸಿದ ‘ಇಧು ನಮ್ಮ ಲಯಕ್ಕಂ’ (ಇದು ನಮ್ಮ ಚಳವಳಿ) ಎಂಬ ರಾಜಕೀಯ ಪಕ್ಷಕ್ಕೆ ಜನರ ಬೆಂಬಲ ವ್ಯಕ್ತವಾಗಿದೆ. ವೆಬ್ ಸೈಟ್ ಶುರುವಾದ ಕೇವಲ 10 ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರು ವಿವಿಧ ದೇವಸ್ಥಾನಗಳಲ್ಲಿ ಅಣ್ಣಾಮಲೈ ಅವರ ಹೊಸ ಪಕ್ಷಕ್ಕಾಗಿ ಪ್ರಾರ್ಥನೆ ಪೂಜೆ ನೆರವೇರಿಸಿದ್ದು ಇದು ಬಿಜೆಪಿಯ ಅಂಗಪಕ್ಷವೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
ಈ ವಿಚಾರವಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಣ್ಣಾಮಲೈ, ನಮ್ಮ ರಾಜಕೀಯ ಆಂದೋಲನವು ಒಂದು ಮೈಲಿಗಲ್ಲನ್ನು ಸಾಧಿಸಿದೆ. ಕೇವಲ 10 ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ನೋಂದಾಯಿಸಿಕೊಂಡಿದ್ದಾರೆ. ಈ ಅಸಾಧಾರಣ ಪ್ರತಿಕ್ರಿಯೆಯು ನಮ್ಮ ದೃಷ್ಟಿಕೋನ ಮತ್ತು ಸಾಮೂಹಿಕ ಧ್ಯೇಯದಲ್ಲಿ ಇಟ್ಟಿರುವ ನಂಬಿಕೆಯ ಪ್ರಬಲ ಪ್ರತಿಬಿಂಬವಾಗಿದೆ. ಈ ಆಂದೋಲನದಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ವ್ಯಕ್ತಿಗೂ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಅಣ್ಣಾಮಲೈ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಶುಕ್ರವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನು ನೀಡಿದ್ದರು.
