ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪ್ರಿಯಕರನೊಂದಿಗೆ ಸೇರಿ ಮಗನನ್ನೇ ಕೊಂದ ತಾಯಿ!!

ಕರ್ನೂಲ್: ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪ್ರಿಯಕರನೊಂದಿಗೆ ಸೇರಿ ತಾಯಿಯೇ ಮಗನನ್ನ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ಪಟ್ಟಣದಲ್ಲಿ ನಡೆದಿದೆ.

ವೀರೇಂದ್ರ(15) ಮೃತ ಬಾಲಕ. ಗಂಗಮ್ಮ ಹಾಗೂ ಪ್ರಿಯಕರ ದರ್ಗಪ್ಪ ಬಂಧಿತ ಆರೋಪಿಗಳು.

ತಾಯಿ ಇನ್ನೋರ್ವ ವ್ಯಕ್ತಿಯ ಜೊತೆ ಸಂಬಂಧ ಹೊಂದಿರುವ ಬಗ್ಗೆ ವೀರೇಂದ್ರ ಆಗಾಗ ಪ್ರಶ್ನಿಸುತ್ತಿದ್ದನು. ಅಲ್ಲದೇ ಸಂಬಂಧಿಕರು ಮತ್ತು ಗ್ರಾಮಸ್ಥರ ಮುಂದೆಯೂ ಈ ವಿಚಾರವನ್ನು ಹೇಳಿದ್ದ. ಹೀಗಾಗಿ ಮಗನಿಂದಲೇ ತನ್ನ ಅಕ್ರಮ ಸಂಬಂಧ ಬಹಿರಂಗವಾಗುತ್ತದೆ ಎಂಬ ಆತಂಕದಲ್ಲಿ ತಾಯಿ ಹಾಗೂ ಆಕೆಯ ಪ್ರಿಯಕರ ಸೇರಿಕೊಂಡು ಬಾಲಕನನ್ನು ಕೊಲೆ ಮಾಡಿದ್ದಾರೆ.

ಕೊಲೆ ಬಳಿಕ ವೀರೇಂದ್ರನ ಮೃತದೇಹವನ್ನು ಗ್ರಾಮದ ಹೊರವಲಯದ ಸ್ಮಶಾನದಲ್ಲಿ ರಹಸ್ಯವಾಗಿ ಹೂತು ಹಾಕಿ ನಂತರ ಕೊಲೆ ವಿಚಾರವನ್ನು ಮುಚ್ಚಿ ಹಾಕಲು ಗಂಗಮ್ಮ ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಅಲ್ಲದೆ ಮಗನ ಹುಡುಕಾಟದಲ್ಲಿಯೂ ಭಾಗಿಯಾಗಿದ್ದಳು. ಇಷ್ಟೇ ಅಲ್ಲದೆ, ತನಿಖೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿ, ಮಗನ ಪತ್ತೆಗೆ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ಮೊರೆ ಹೋಗಿದ್ದಳು.

ಹೈಕೋರ್ಟ್ ಸೂಚನೆಯ ಬಳಿಕ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಲಾಗಿತ್ತು. ಕರೆ ವಿವರಗಳು, ತಾಂತ್ರಿಕ ಸಾಕ್ಷ್ಯಗಳು ಹಾಗೂ ಸ್ಥಳೀಯ ಸಾಕ್ಷಿದಾರರ ಮಾಹಿತಿ ಪಡೆದ ಪೊಲೀಸರಿಗೆ ತಾಯಿಯ ಮೇಲೆಯೇ ಅನುಮಾನ ಮೂಡಿದೆ. ಬಳಿಕ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರಬಂದಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಸ್ಮಶಾನದಲ್ಲಿ ಹೂತಿದ್ದ ವೀರೇಂದ್ರನ ಮೃತದೇಹವನ್ನು ಅಧಿಕಾರಿಗಳ ಸಮ್ಮುಖದಲ್ಲಿ ಹೊರತೆಗೆಯಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

error: Content is protected !!