ಕಾರ್ಕಳ: ತಾಲೂಕಿನ ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆಯಿಂದ ಸಚ್ಚೇರಿಪೇಟೆಗೆ ಹೋಗುವ ರಸ್ತೆಯ ತಿರುವಿನಲ್ಲಿ ಶುಕ್ರವಾರ ಸಂಜೆ ವೇಗವಾಗಿ ಬಂದ ಕಾರು ಮತ್ತು ಆಟೋರಿಕ್ಷಾ ನಡುವೆ ನಡೆದ ಈ ಮುಖಾಮುಖಿ ಢಿಕ್ಕಿಯಲ್ಲಿ ರಿಕ್ಷಾ ಪ್ರಯಾಣಿಕರಾಗಿದ್ದ ಶ್ರೀಕಾಂತ್ ಎಂಬವರು ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.



ಢಿಕ್ಕಿಯ ತೀವ್ರತೆಗೆ ಆಟೋರಿಕ್ಷಾದಲ್ಲಿದ್ದ ಪ್ರಯಾಣಿಕ ಶ್ರೀಕಾಂತ್ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ, ದುರದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ರಿಕ್ಷಾ ಚಾಲಕ ಮಹಮ್ಮದ್ ಕೈಫ್ ಎಂಬವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
.


ಅಪಘಾತದ ಭೀಕರತೆಗೆ ಆಟೋರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನ ಮುಂಭಾಗ ಭಾಗಶಃ ಹಾನಿಯಾಗಿದೆ. ಕಾರು ಚಾಲಕ, ಸಚ್ಚೇರಿಪೇಟೆ ನಿವಾಸಿ ಅನಂತ್ ಭಟ್ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸಂಪೂರ್ಣವಾಗಿ ಜಖಂಗೊಂಡಿರುವ ರಿಕ್ಷಾದ ಸ್ಥಿತಿಯನ್ನು ನೋಡಿದಾಗ, ಕಾರು ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯೇ ಈ ದುರಂತಕ್ಕೆ ನೇರ ಕಾರಣ ಇರಬಹುದೆಂದು ಸ್ಥಳೀಯರು ಶಂಕಿಸಿದ್ದಾರೆ.
ಸ್ಥಳೀಯರ ಪ್ರಕಾರ, ಜಾರಿಗೆಕಟ್ಟೆ-ಸಚ್ಚೇರಿಪೇಟೆ ರಸ್ತೆಯು ತೀವ್ರವಾದ ತಿರುವುಮುರುವುಗಳಿಂದ ಕೂಡಿದೆ. ಹೀಗಾಗಿ ಈ ಭಾಗದಲ್ಲಿ ಸಾಮಾನ್ಯವಾಗಿ ವಾಹನ ಸವಾರರು ಅತ್ಯಂತ ನಿಧಾನವಾಗಿ ಮತ್ತು ಜಾಗರೂಕರಾಗಿ ವಾಹನ ಚಲಾಯಿಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ವಾಹನಗಳ ಅತಿ ವೇಗದ ಚಾಲನೆಯ ಆವಾಂತರದಿಂದಾಗಿ ಈ ತಿರುವಿನಲ್ಲಿ ಸಾಲು ಸಾಲು ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ರಸ್ತೆಯಲ್ಲಿದ್ದ ವಾಹನಗಳನ್ನು ತೆರವುಗೊಳಿಸಿ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.