ಮಣೇಲ್‌ನಲ್ಲಿ ಮೇ 30ರಿಂದ ಎರಡು ದಿನಗಳ ʻಗ್ರಾಮಡೊಂಜಿ ಚಿತ್ರ ಕೂಟೋ’ ಕಲಾ ಶಿಬಿರದ ರಂಗು

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಇಂಟಾಕ್ ಮಂಗಳೂರು ವಿಭಾಗ ಹಾಗೂ ರಾಣಿ ಅಬ್ಬಕ್ಕ ಚಾವಡಿ ಮಣೇಲ್ ಇವುಗಳ ಜಂಟಿ ಆಶ್ರಯದಲ್ಲಿ ಮೇ 30 ಮತ್ತು 31ರಂದು ಎರಡು ದಿನಗಳ ಕಾಲ ಗಂಜಿಮಠ ಪಂಚಾಯತ್‌ ವ್ಯಾಪ್ತಿಯ ಮಣೇಲ್‌(ಮಳಲಿ)ನಲ್ಲಿ ವಿಶೇಷ ಕಲಾ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ‘ಮಣೇಲ್ ಗ್ರಾಮಡೊಂಜಿ ಚಿತ್ರ ಕೂಟೋ’ ಆಯೋಜಿಸಲಾಗಿದೆ.

ಮಣೇಲ್‌ನ ಹೆಮ್ಮೆಯ ರಾಜವಂಶಸ್ಥೆ ರಾಣಿ ಅಬ್ಬಕ್ಕ ಅವರ ಸ್ಮರಣಾರ್ಥ ಆಯೋಜಿತವಾಗಿರುವ ಈ ಅಪರೂಪದ ಕಲಾ ಸಮ್ಮಿಲನವು ಮೇ 30ರ ಶನಿವಾರದಂದು ಬೆಳಗ್ಗೆ 10.00 ಗಂಟೆಗೆ ಮಣೇಲ್‌ನ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಜರುಗಲಿದೆ.

ಈ ಪ್ರಕೃತಿ ಮತ್ತು ಕಲಾ ಶಿಬಿರದ ಉದ್ಘಾಟನೆಯನ್ನು ಪ್ರಖ್ಯಾತ ಚಿತ್ರ ಕಲಾವಿದರಾದ ಗಣೇಶ್ ಸೋಮಯಾಜಿ ಅವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಗೌರವಾನ್ವಿತ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕಟ್ಟೆಮಾರ್ ವಂಶಸ್ಥರಾದ ಪ್ರಶಾಂತ್ ಕುಮಾರ್ ಕಟ್ಟೆಮಾರ್, ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಟ್ರಸ್ಟಿ ವಾಮನ ನಾಯಕ್ ಮಣೇಲ್ ಹಾಗೂ ಜುಮ್ಮಾ ಮಸೀದಿ ಮಣೇಲ್‌ನ ಅಧ್ಯಕ್ಷರಾದ ಅಬ್ದುಲ್ ರಜಾಕ್ ಭಾಗವಹಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

.

 

ಇದೇ ಸಂದರ್ಭದಲ್ಲಿ ಮಣೇಲ್ ಗ್ರಾಮದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ವಿಚಾರ ಕೂಟ ಹಾಗೂ ವಿಶೇಷ ಉಪನ್ಯಾಸಗಳು ಜರುಗಲಿವೆ. ಇತಿಹಾಸ ತಜ್ಞರು ಹಾಗೂ ನಿವೃತ್ತ ಉಪನ್ಯಾಸಕರಾದ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಅವರು ʻರಾಣಿ ಅಬ್ಬಕ್ಕನ ಚರಿತ್ರೆ’ ಕುರಿತು ಹಾಗೂ ನಿವೃತ್ತ ಉಪನ್ಯಾಸಕರಾದ ಪ್ರೊ. ಅಕ್ಷಯ್ ಕುಮಾರ್ ಅವರು ʻಮಣೇಲ್ ಗ್ರಾಮದ ಸಾಮಾಜಿಕ ಸಾಂಸ್ಕೃತಿಕ ನೆಲೆ’ ಎಂಬ ವಿಷಯದ ಕುರಿತು ಮಹತ್ವದ ಉಪನ್ಯಾಸ ನೀಡಲಿದ್ದಾರೆ.

ಕಲಾ ಶಿಬಿರದ ಮೊದಲ ದಿನವಾದ ಶನಿವಾರ ಸಂಜೆ 6.30ಕ್ಕೆ ಸರಿಯಾಗಿ ಕರಾವಳಿಯ ಜನಪ್ರಿಯ ಸಂಗೀತ ಸಂಜೆ ಕಾರ್ಯಕ್ರಮವಾದ ʻನಾದ ಮಣಿನಾಲ್ಕೂರು’ ಪದ ಕೂಟೋ ಪ್ರದರ್ಶನಗೊಳ್ಳಲಿದ್ದು, ಇದು ಪ್ರೇಕ್ಷಕರಿಗೆ ಕಿವಿಗೆ ಇಂಪು ನೀಡಲಿದೆ.

ಎರಡು ದಿನಗಳ ಈ ಕಲಾ ಜಗತ್ತಿನಲ್ಲಿ ಕರಾವಳಿ ಭಾಗದ ಪ್ರಸಿದ್ಧ ಕುಂಚ ಕಲಾವಿದರಾದ ವಿಲ್ಸನ್ ಸೋಜಾ, ಸಂತೋಷ್ ಅಂದ್ರಾಡೆ, ಜೀವನ್ ಸಾಲ್ಯಾನ್, ಹರೀಶ್ ಕೊಡಿಯಾಲಬೈಲ್, ರೇಷ್ಮಾ ಎಸ್., ಧೀಕ್ಷಾ ಎಂ., ನಶ್ಮಿತಾ ಡಿ ನಾರಾಯಣ್, ಶ್ರೀಕಾಂತ್ ಎ., ಅಭಿಷೇಕ್ ತೀರ್ಥಹಳ್ಳಿ, ರೂಪೇಶ್ ಸುವರ್ಣ, ಎನ್. ಸಂದೀಪ್ ಹಾಗೂ ಲಿಖಿತ್ ಪೂಜಾರಿ ಪಾಲ್ಗೊಂಡು ತಮ್ಮ ಸೃಜನಶೀಲ ಕುಂಚದ ಮೂಲಕ ಮಣೇಲ್ ಗ್ರಾಮದ ಗ್ರಾಮೀಣ ಸೌಂದರ್ಯವನ್ನು ಕ್ಯಾನ್ವಾಸ್ ಮೇಲೆ ಅದ್ಭುತವಾಗಿ ಮೂಡಿಸಲಿದ್ದಾರೆ.

ಈ ಇಡೀ ಕಾರ್ಯಕ್ರಮಕ್ಕೆ ಆರ್ಟ್ ಕೆನರಾ ಟ್ರಸ್ಟ್ ವಿಶೇಷ ಸಹಕಾರ ನೀಡಿದೆ. ಕಲೆಯ ಇತಿಹಾಸವನ್ನು ಯುವ ಪೀಳಿಗೆಗೆ ದಾಟಿಸುವ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯ ಸಂಚಾಲಕ ಬಾಬು ಪೂಜಾರಿ ಮಣೇಲ್ ಹಾಗೂ ಇಂಟಾಕ್ ಮಂಗಳೂರು ವಿಭಾಗದ ಸಂಚಾಲಕ ಸುಭಾಸ್ ಚಂದ್ರ ಬಸು ಪ್ರಕಟಣೆಯಲ್ಲಿ ಕೋರಿದ್ದಾರೆ.

error: Content is protected !!