ಜ್ಯೋತಿಷಿ ದ್ವಾರಕಾನಾಥ್ ಅವರ ಆ ಒಂದು ಭವಿಷ್ಯವಾಣಿ ನಿಜವಾಯ್ತು!

ಬೆಂಗಳೂರು: ರಾಜಕಾರಣದಲ್ಲಿ ಕಠಿಣ ಪರಿಶ್ರಮದಷ್ಟೇ ಗ್ರಹಗತಿಗಳ ಸಾನ್ನಿಧ್ಯವೂ ಮುಖ್ಯ ಎಂಬುದಕ್ಕೆ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೀವನವೇ ಸಾಕ್ಷಿ. ಇಂದು ಅವರು ಸಿಎಂ ಕುರ್ಚಿಯೇರುತ್ತಿರುವ ಬೆನ್ನಲ್ಲೇ, ಅವರ ಆಪ್ತ ಜ್ಯೋತಿಷ್ಯ ಗುರುಗಳಾದ ಆಚಾರ್ಯ ದ್ವಾರಕಾನಾಥ್ ಅವರು ಹಲವು ವರ್ಷಗಳ ಹಿಂದೆಯೇ ನುಡಿದಿದ್ದ ರೋಚಕ ಭವಿಷ್ಯವಾಣಿಗಳ ಕುರಿತು ದೇಶಾದ್ಯಂತ ಭಾರಿ ಚರ್ಚೆ ಆರಂಭವಾಗಿದೆ.

ಮೊದಲು ಜೈಲು ವಾಸ, ಆಮೇಲೆ ಸಿಎಂ ಪಟ್ಟ’ ಎಂದಿದ್ದ ಗುರುಗಳು!
ಸುಮಾರು 25 ವರ್ಷಗಳ ಹಿಂದೆ, ಅಂದರೆ ವರ್ಷ 2000ದ ಆಸುಪಾಸಿನಲ್ಲಿ ಜ್ಯೋತಿಷಿ ದ್ವಾರಕಾನಾಥ್ ಅವರು ಡಿ.ಕೆ. ಶಿವಕುಮಾರ್ ಅವರ ಜಾತಕ ನೋಡಿ ಒಂದು ಆಘಾತಕಾರಿ ಹಾಗೂ ಅಷ್ಟೇ ರೋಮಾಂಚನಕಾರಿ ಭವಿಷ್ಯ ನುಡಿದಿದ್ದರು. “ನಿಮ್ಮ ಜಾತಕದಲ್ಲಿ ಕರ್ನಾಟಕದ ಸರ್ವೋಚ್ಚ ನಾಯಕನಾಗುವ ಪ್ರಬಲ ರಾಜಯೋಗವಿದೆ. ಆದರೆ, ಅದಕ್ಕೂ ಮುನ್ನ ನೀವು ಒಮ್ಮೆ ಜೈಲು ವಾಸ ಅನುಭವಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದರು. ಅಂದು ನುಡಿದಿದ್ದ ಆ ಭವಿಷ್ಯದ ಮೊದಲ ಭಾಗ 2019ರಲ್ಲಿ ಡಿ.ಕೆ. ಶಿವಕುಮಾರ್ ತಿಹಾರ್ ಜೈಲು ಸೇರಿದಾಗ ನಿಜವಾಗಿತ್ತು. ಇದೀಗ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಜ್ಜಾಗುತ್ತಿದ್ದಂತೆ, ಅಂದಿನ ಭವಿಷ್ಯದ ಎರಡನೇ ಭಾಗವೂ ನೂರಕ್ಕೆ ನೂರರಷ್ಟು ನಿಜವಾದಂತಾಗಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

.

 

ಡಿ.ಕೆ. ಶಿವಕುಮಾರ್ ಮತ್ತು ಜ್ಯೋತಿಷಿ ದ್ವಾರಕಾನಾಥ್ ನಡುವಿನ ನಂಟು ಮೂರು ದಶಕಗಳಷ್ಟು ಹಳೆಯದು. 1999ರ ರಾಜಕೀಯ ತಿರುವಿನಲ್ಲಿ, ಎಸ್.ಎಂ. ಕೃಷ್ಣ ಸಂಪುಟದಿಂದ ಡಿಕೆಶಿ ಹೆಸರು ಕೊನೆ ಕ್ಷಣದಲ್ಲಿ ಕೈಬಿಡಲಾದಾಗ ಅವರು ರಾತ್ರೋರಾತ್ರಿ ಜ್ಯೋತಿಷಿ ಮನೆಗೆ ಓಡಿದ್ದರು. “ನಿನ್ನ ಹಕ್ಕನ್ನು ನೀನು ಕೇಳದೇ ಹೋದರೆ ನಿನಗೆ ಸಚಿವ ಸ್ಥಾನ ಸಿಗಲ್ಲ” ಎಂದು ದ್ವಾರಕಾನಾಥ್ ಧೈರ್ಯ ತುಂಬಿದ್ದರು. ಗುರುಗಳ ಮಾತು ಕೇಳಿ ಡಿಕೆಶಿ ಅಂದೇ ರಾತ್ರಿ 2 ಗಂಟೆಗೆ ಎಸ್.ಎಂ. ಕೃಷ್ಣ ಅವರ ಮನೆ ಬಾಗಿಲು ತಟ್ಟಿ ಹಠ ಹಿಡಿದು, ಮರುದಿನ ಬೆಳಗ್ಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವಲ್ಲಿ ಯಶಸ್ವಿಯಾಗಿದ್ದರು.

2023ರಲ್ಲಿ ಸಿಎಂ ರೇಸ್‌ನಿಂದ ಹಿಂದೆ ಸರಿಯಲು ಜಾತಕವೇ ಕಾರಣ!
೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದಾಗ ಡಿ.ಕೆ. ಶಿವಕುಮಾರ್ ತಾವೇ ಸಿಎಂ ಆಗಬೇಕೆಂದು ಪಟ್ಟು ಹಿಡಿದಿದ್ದರು. ಆದರೆ, ರೇಸ್‌ನಿಂದ ಅವರು ಹಿಂದೆ ಸರಿಯಲು ಜ್ಯೋತಿಷಿ ದ್ವಾರಕಾನಾಥ್ ಅವರ ಸಲಹೆಯೇ ಕಾರಣವಾಗಿತ್ತು. ಆ ಸಮಯದಲ್ಲಿ ಡಿಕೆಶಿ ಜಾತಕ ಪರಿಶೀಲಿಸಿದ್ದ ದ್ವಾರಕಾನಾಥ್, “ನಿಮ್ಮ ಜಾತಕದಲ್ಲಿ ಈಗ ಪೂರ್ಣ ರಾಜಯೋಗವಿಲ್ಲ, ಸದ್ಯಕ್ಕೆ ತಾಳ್ಮೆಯಿಂದಿರಿ. ನವೆಂಬರ್ 2025ರ ನಂತರ ನಿಮ್ಮ ಗ್ರಹಗತಿಗಳು ಸಂಪೂರ್ಣವಾಗಿ ಬದಲಾಗಲಿವೆ. ಆಗ ಯಾವುದೇ ಸಂಘರ್ಷವಿಲ್ಲದೇ ಈ ಉನ್ನತ ಕುರ್ಚಿ ನಿಮ್ಮನ್ನು ಹುಡುಕಿಕೊಂಡು ಬರಲಿದೆ” ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಗುರುಗಳ ಮಾತನ್ನು ಕಣ್ಮುಚ್ಚಿ ನಂಬಿದ ಡಿಕೆಶಿ ಅಂದು ಸಿದ್ದರಾಮಯ್ಯ ಅವರಿಗೆ ದಾರಿ ಮಾಡಿಕೊಟ್ಟು ತಾಳ್ಮೆಯಿಂದ ಕಾದಿದ್ದರು.

ಯಾರು ಈ ಆಚಾರ್ಯ ದ್ವಾರಕಾನಾಥ್?
ಬೆಂಗಳೂರಿನ ಖ್ಯಾತ ಜ್ಯೋತಿಷಿ, ಅಂಕಶಾಸ್ತ್ರ ಹಾಗೂ ತಾಂತ್ರಿಕ ವಿದ್ವಾಂಸರಾಗಿರುವ ಆಚಾರ್ಯ ದ್ವಾರಕಾನಾಥ್ ಕೇವಲ ಡಿ.ಕೆ. ಶಿವಕುಮಾರ್ ಅವರ ಜ್ಯೋತಿಷಿಯಷ್ಟೇ ಅಲ್ಲ, ಅವರ ಅತ್ಯಂತ ನಂಬಿಕಸ್ಥ ಮಾರ್ಗದರ್ಶಕ ಮತ್ತು ಆಪತ್ಬಾಂಧವ. ಡಿಕೆಶಿ ಅವರ ಜೀವನದ ಪ್ರತಿಯೊಂದು ಶುಭ ಕಾರ್ಯ ಮತ್ತು ರಾಜಕೀಯ ನಿರ್ಧಾರಗಳು ಇವರ ಸಲಹೆಯ ಮೇಲೆಯೇ ನಡೆಯುತ್ತವೆ. ಈ ಹಿಂದೆ ದೇಶದ ಪ್ರಮುಖ ನಾಯಕರಾದ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಪಿ. ಚಿದಂಬರಂ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಂತಹ ದಿಗ್ಗಜರಿಗೂ ಇವರು ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದ್ದರು ಎಂಬುದು ಗಮನಾರ್ಹ.

ಪ್ರಸ್ತುತ ತಮ್ಮ ನೂತನ ಸಚಿವ ಸಂಪುಟದ ಪ್ರಮಾಣವಚನಕ್ಕೂ ಮುನ್ನ ಡಿ.ಕೆ. ಶಿವಕುಮಾರ್ ಅವರು ದ್ವಾರಕಾನಾಥ್ ಅವರ ಬಳಿ ಮೂರು ಶ್ರೇಷ್ಠ ಮುಹೂರ್ತಗಳನ್ನು ನೀಡುವಂತೆ ಕೋರಿದ್ದಾರೆ. ಜ್ಯೋತಿಷಿಗಳ ಸಲಹೆಯಂತೆ ಸೋಮವಾರ ಸಂಜೆಯ ʻಗೋಧೂಳಿ ಲಗ್ನ’ದಲ್ಲಿ ಅಧಿಕಾರ ಸ್ವೀಕರಿಸಲು ಡಿಕೆಶಿ ಒಲವು ತೋರಿದ್ದು, ಅವರ ಇಡೀ ರಾಜಕೀಯ ಸಾಮ್ರಾಜ್ಯದ ಯಶಸ್ಸಿನ ಸೂತ್ರ ದ್ವಾರಕಾನಾಥ್ ಅವರ ಜ್ಯೋತಿಷ್ಯ ಲೆಕ್ಕಾಚಾರದ ಮೇಲೆಯೇ ನಿಂತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

error: Content is protected !!