ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟ ಪುನರ್ರಚನೆಯ ಕಸರತ್ತು ಭಾರೀ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಶಯದಂತೆ ಪಕ್ಷದಲ್ಲಿ ʻಪೀಳಿಗೆಯ ಬದಲಾವಣೆ’ ತರಲು ಹೈಕಮಾಂಡ್ ಸಂಪೂರ್ಣ ಸಜ್ಜಾಗಿದೆ. ಇದರ ಮೊದಲ ಹಂತವಾಗಿ, ಸಿದ್ದರಾಮಯ್ಯ ಸಂಪುಟದಲ್ಲಿದ್ದ 70 ವರ್ಷ ದಾಟಿದ ಪ್ರಭಾವಿ ಹಿರಿಯ ಸಚಿವರನ್ನು ಕೈಬಿಟ್ಟು, ಅವರ ಜಾಗದಲ್ಲಿ 50 ವರ್ಷದೊಳಗಿನ ಯುವ ನಾಯಕರಿಗೆ ಮಣೆ ಹಾಕಲು ದೆಹಲಿ ಮಟ್ಟದಲ್ಲಿ ಹಸಿರು ನಿಶಾನೆ ಸಿಕ್ಕಿದೆ ಎನ್ನಲಾಗಿದೆ.

70 ದಾಟಿದ ಹಿರಿಯರಿಗೆ ಕೋಕ್: ಮೂವರು ಪ್ರಭಾವಿ ಸಚಿವರು ಮನೆಗೆ?
ಪಕ್ಷಕ್ಕೆ ಹೊಸ ಕಳೆ ಮತ್ತು ರಾಜಕೀಯವಾಗಿ ಅತ್ಯಂತ ಆಕ್ರಮಣಕಾರಿ ವೇಗವನ್ನು ನೀಡುವ ಸಲುವಾಗಿ ಹೈಕಮಾಂಡ್ ಹಿರಿಯರನ್ನು ಕೈಬಿಡುವ ಕಠಿಣ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಾಗೂ 70 ವರ್ಷದ ವಯೋಮಿತಿ ದಾಟಿರುವ ಮೂವರು ಪ್ರಭಾವಿ ಸಚಿವರಾದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಮತ್ತು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ನೂತನ ಸಂಪುಟದಲ್ಲಿ ಸ್ಥಾನ ಸಿಗುವುದು ಅನುಮಾನ ಎನ್ನಲಾಗಿದೆ. ದಶಕಗಳ ಕಾಲ ಪಕ್ಷ ಮತ್ತು ಸರ್ಕಾರವನ್ನು ಮುನ್ನಡೆಸಿದ್ದ ಈ ಹಿರಿಯ ನಾಯಕರನ್ನು ಸಂಪುಟದಿಂದ ಮುಕ್ತಗೊಳಿಸಿ, ಸಾಂಸ್ಥಿಕ ಜವಾಬ್ದಾರಿ ನೀಡುವ ಸಾಧ್ಯತೆ ದಟ್ಟವಾಗಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
.


ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಯುವಮಯವಾಗಿಸಬೇಕು ಎಂಬುದು ರಾಹುಲ್ ಗಾಂಧಿ ಅವರ ದೀರ್ಘಕಾಲದ ಯೋಜನೆಯಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರಿಗೂ 50 ವರ್ಷದೊಳಗಿನ ಶಾಸಕರಿಗೆ ಹೆಚ್ಚಿನ ಆಡಳಿತಾತ್ಮಕ ಜವಾಬ್ದಾರಿ ನೀಡುವಂತೆ ಸೂಚಿಸಲಾಗಿತ್ತು. ಈಗ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಇನ್ನಿಂಗ್ಸ್‌ನಲ್ಲಿ ಈ ಸೂತ್ರವನ್ನು ನೂರಕ್ಕೆ ನೂರರಷ್ಟು ಜಾರಿಗೊಳಿಸಲು ಹೈಕಮಾಂಡ್ ತೀರ್ಮಾನಿಸಿದೆ. ಆಡಳಿತದಲ್ಲಿ ಹೊಸ ಚಿಂತನೆ, ವೇಗ ಮತ್ತು ಮುಂಬರುವ 2029ರ ಸಾರ್ವತ್ರಿಕ ಚುನಾವಣೆಗೆ ದ್ವಿತೀಯ ಹಂತದ ನಾಯಕರನ್ನು ಸಿದ್ಧಪಡಿಸಲು ಯುವ ಶಾಸಕರಿಗೆ ಸಚಿವ ಸ್ಥಾನದ ಸೌಭಾಗ್ಯ ಒಲಿಯಲಿದೆ.
ಕರ್ನಾಟಕದ ಒಟ್ಟು 34 ಸಂಪುಟ ಸ್ಥಾನಗಳ ಪೈಕಿ, ಕೆ.ಎನ್. ರಾಜಣ್ಣ ಮತ್ತು ಬಿ. ನಾಗೇಂದ್ರ ಅವರ ರಾಜೀನಾಮೆ ಹಾಗೂ ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನದಿಂದಾಗಿ ಈಗಾಗಲೇ 3 ಸ್ಥಾನಗಳು ಖಾಲಿಯ ಉಳಿದಿವೆ. ಇದರ ಜೊತೆಗೆ ಈಗ 70 ವರ್ಷ ಮೇಲ್ಪಟ್ಟ ಹಿರಿಯ ಸಚಿವರನ್ನು ಕೈಬಿಟ್ಟರೆ ಹೈಕಮಾಂಡ್‌ಗೆ ದೊಡ್ಡ ಮಟ್ಟದಲ್ಲಿ ಸಂಪುಟ ಸರ್ಜರಿ ಮಾಡಲು ಮುಕ್ತ ಅವಕಾಶ ಸಿಗಲಿದೆ. ಈ ಖಾಲಿ ಸ್ಥಾನಗಳನ್ನು ಸಂಪೂರ್ಣವಾಗಿ ಯುವ ಮತ್ತು ಹಿಂದುಳಿದ, ದಲಿತ ಹಾಗೂ ಶೋಷಿತ ಸಮುದಾಯಗಳ ಉದಯೋನ್ಮುಖ ನಾಯಕರಿಂದ ತುಂಬಲು ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಗಿದೆ.
ಬಂಡಾಯ ತಣಿಸುವ ಸವಾಲು: ಹಿರಿಯರ ನಡೆ ಏನು?
ರಾಜಕೀಯವಾಗಿ ಅತ್ಯಂತ ಪ್ರಭಾವಿಯಾಗಿರುವ ಡಾ. ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್ ಅವರಂತಹ ನಾಯಕರನ್ನು ಸಂಪುಟದಿಂದ ಕೈಬಿಡುವುದು ಅಷ್ಟು ಸುಲಭದ ಮಾತಲ್ಲ. ಪಕ್ಷದಲ್ಲಿ ಬಂಡಾಯ ಏಳದಂತೆ ಅತ್ಯಂತ ನಾಜೂಕಿನಿಂದ ಈ ಪ್ರಕ್ರಿಯೆಯನ್ನು ನಡೆಸಬೇಕಿದೆ. ಹಿರಿಯರ ಅನುಭವವನ್ನು ಗೌರವಿಸುತ್ತಲೇ, ಅವರಿಗೆ ಸಾಂಸ್ಥಿಕ ಮಟ್ಟದಲ್ಲಿ ಅಥವಾ ಮಾರ್ಗದರ್ಶಕ ಮಂಡಳಿಯಂತಹ ಉನ್ನತ ಸ್ಥಾನಗಳನ್ನು ನೀಡಿ ಸಮಾಧಾನಪಡಿಸಲು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಜಂಟಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ.