ನವದೆಹಲಿ: ದೇಶದಾದ್ಯಂತ ಕಡು ಬೇಸಿಗೆಯ ಬೇಗೆಯಿಂದ ಕಂಗಾಲಾಗಿರುವ ಕೋಟ್ಯಂತರ ಜನರಿಗೆ ಆಶಾಕಿರಣವಾಗಬೇಕಿದ್ದ ನೈಋತ್ಯ ಮುಂಗಾರು ಮಾರುತಗಳ ಆಗಮನಕ್ಕೆ ಜಾಗತಿಕ ಹವಾಮಾನ ವಿದ್ಯಮಾನ ʻಎಲ್ ನಿನೋ’ (El Niño) ಅಡ್ಡಿಯಾಗಿದೆ. ಈ ವರ್ಷ ಕೇರಳಕ್ಕೆ ನಿರೀಕ್ಷಿತ ಸಮಯಕ್ಕಿಂತ ಮುಂಚಿತವಾಗಿ ಮುಂಗಾರು ಪ್ರವೇಶಿಸಲಿದೆ ಎಂದು ಅಂದಾಜಿಸಲಾಗಿದ್ದರೂ, ಪೆಸಿಫಿಕ್ ಮಹಾಸಾಗರದಲ್ಲಿ ಬಲಗೊಳ್ಳುತ್ತಿರುವ ಎಲ್ ನಿನೋ ಪ್ರಭಾವದಿಂದಾಗಿ ಮಾರುತಗಳು ತಾತ್ಕಾಲಿಕವಾಗಿ ದುರ್ಬಲಗೊಂಡಿದ್ದು, ಕೇರಳ ಪ್ರವೇಶ ವಿಳಂಬವಾಗಿದೆ. ಇದು ದೇಶದಾದ್ಯಂತ ಕೃಷಿ ಚಟುವಟಿಕೆಗಳು ಮತ್ತು ನೀರಿನ ಪೂರೈಕೆಯ ಮೇಲೆ ಭೀತಿ ಮೂಡಿಸಿದೆ.

ಭಾರತೀಯ ಹವಾಮಾನ ಇಲಾಖೆ (IMD) ಆರಂಭದಲ್ಲಿ ಮೇ 26 ರ ಸುಮಾರಿಗೆ ಕೇರಳಕ್ಕೆ ಮುಂಗಾರು ಬರಬಹುದು ಎಂದು ಲೆಕ್ಕಾಚಾರ ಹಾಕಿತ್ತು. ಆದರೆ, ಎಲ್ ನಿನೋ ಪರಿಸ್ಥಿತಿಗಳು ಮತ್ತು ಬಂಗಾಳ ಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ಸುಳಿಗಾಳಿಯು ಮಾರುತಗಳ ವೇಗವನ್ನು ತಡೆದಿದೆ. ಎಲ್ ನಿನೋ ಪ್ರಭಾವದಿಂದಾಗಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಕಳವಳ ವ್ಯಕ್ತಪಡಿಸಿದೆ. ದೀರ್ಘಕಾಲದ ಸರಾಸರಿಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಇರುವುದರಿಂದ ರೈತರು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
ತಾತ್ಕಾಲಿಕ ಹಿನ್ನಡೆಯ ನಂತರ, ಮಳೆ ಹೊತ್ತು ತರುವ ಮುಂಗಾರು ಮಾರುತಗಳು ಈಗ ಕ್ರಮೇಣ ಮತ್ತೆ ಬಲವನ್ನು ಪಡೆದುಕೊಳ್ಳುತ್ತಿವೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಮುಂಗಾರು ಈಗಾಗಲೇ ಅರಬ್ಬಿ ಸಮುದ್ರದ ಕೆಲವು ಭಾಗಗಳು, ಲಕ್ಷದ್ವೀಪ, ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರಕ್ಕೆ ವಿಸ್ತರಿಸಿದೆ. ಮುಂದಿನ 2 ರಿಂದ 3 ದಿನಗಳಲ್ಲಿ ವಾತಾವರಣ ಮತ್ತಷ್ಟು ಸುಧಾರಿಸಲಿದ್ದು, ಮುಂಗಾರು ಚುರುಕಾಗಲು ಪರಿಸ್ಥಿತಿಗಳು ಅನುಕೂಲಕರವಾಗಿವೆ.
