“ಸುಸೂತ್ರ ಆಡಳಿತ ನಡೆಸಲು ಅವಕಾಶ ಕೊಡಿ ಸರ್‌”: ಸಿದ್ದು ಪಾದ ಮುಟ್ಟಿ ಡಿಕೆಶಿ ಖಡಕ್ ಸಂದೇಶ? ಕಾವೇರಿ ನಿವಾಸದ ಒಳಗೆ ನಡೆದಿದ್ದೇನು?!

ಬೆಂಗಳೂರು: “ನಾನೇ ಮುಂದಿನ ಮುಖ್ಯಮಂತ್ರಿ, ನನಗೆ ಇನ್ನು ಯಾವುದೇ ಕಿರಿಕ್ ಕೊಡಬೇಡಿ” ಎಂದು ನೇರವಾಗಿಯೇ ಸಾರುವಂತೆ, ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದಿರುವ ದೃಶ್ಯಗಳು ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಗುರುವಾರ ಬೆಳಿಗ್ಗೆ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ನಡೆದ ಹೈವೋಲ್ಟೇಜ್ ಉಪಾಹಾರ ಕೂಟದಲ್ಲಿ ಈ ನಾಟಕೀಯ ಬೆಳವಣಿಗೆ ನಡೆದಿದ್ದು, ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುವುದು ಬಹುತೇಕ ನಿಶ್ಚಿತವಾಗಿದೆ. ಸಭೆಯ ಒಳಗೆ ಉಭಯ ನಾಯಕರ ನಡುವೆ ನಡೆದ ಈ ಭಾವುಕ ಹಾಗೂ ರಾಜಕೀಯ ನಡೆ, ಮುಂದಿನ ಪಟ್ಟಾಭಿಷೇಕಕ್ಕೆ ಡಿಕೆಶಿ ಸಜ್ಜಾಗಿರುವುದನ್ನು ಸ್ಪಷ್ಟವಾಗಿ ಸಾರುತ್ತಿದೆ.

ಸಿದ್ದರಾಮಯ್ಯ ಅವರು ಗುರುವಾರ ಬೆಳಿಗ್ಗೆ ತಮ್ಮ ಅಧಿಕೃತ ನಿವಾಸದಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಉಪಾಹಾರ ಕೂಟ ಏರ್ಪಡಿಸಿದ್ದರು. ಈ ಸಭೆಯು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ದಟ್ಟ ಮುನ್ಸೂಚನೆಗಳನ್ನು ನೀಡಿದೆ.

ಮುಂದಿನ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿ ಹಾಗೂ ಹಾಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಂಪುಟದ ಬಹುತೇಕ ಎಲ್ಲಾ ಸಚಿವರು ಈ ಮಹತ್ವದ ಉಪಾಹಾರ ಕೂಟದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಮುಖ್ಯಮಂತ್ರಿಗಳ ಕಚೇರಿ (CMO) ಹಂಚಿಕೊಂಡಿರುವ ಚಿತ್ರಗಳು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಒಂದು ಚಿತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರನ್ನು ಆತ್ಮೀಯವಾಗಿ ಆಲಂಗಿಸಿಕೊಂಡಿದ್ದರೆ, ಮತ್ತೊಂದು ಚಿತ್ರದಲ್ಲಿ ಶಿವಕುಮಾರ್ ಅವರು ಹಿರಿಯ ನಾಯಕ ಸಿದ್ದರಾಮಯ್ಯ ಅವರ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಿರುವುದು ಕಂಡುಬಂದಿದೆ.

ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಸಿದ್ದರಾಮಯ್ಯ ಅವರು ಈ ಉಪಾಹಾರ ಕೂಟದಲ್ಲೇ ತಮ್ಮ ಸಹೋದ್ಯೋಗಿಗಳ ಸಮ್ಮುಖದಲ್ಲಿ ಸಿಎಂ ಸ್ಥಾನ ತ್ಯಜಿಸುವ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ದಾರಿ ಮಾಡಿಕೊಡುವ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ಬಲವಾಗಿ ವಿಶ್ಲೇಷಿಸಲಾಗುತ್ತಿದೆ. ತಾವು ಕೈಗೊಂಡಿರುವ ಮುಂದಿನ ನಿರ್ಧಾರದ ಕುರಿತು ಇಂದು (ಗುರುವಾರ) ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸುವುದಾಗಿ ಮುಖ್ಯಮಂತ್ರಿಗಳು ಈಗಾಗಲೇ ತಿಳಿಸಿದ್ದಾರೆ.

ಹೈಕಮಾಂಡ್ ತೀರ್ಮಾನಕ್ಕೆ ಒಪ್ಪಿರುವ ಮುಖ್ಯಮಂತ್ರಿಗಳು ರಾಜ್ಯಪಾಲರ ಭೇಟಿಗೆ ಸಮಯ ಕೋರಿದ್ದಾರೆ ಎನ್ನಲಾಗಿದೆ. ಆದರೆ, ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನವೇ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದರೂ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ವೈಯಕ್ತಿಕ ಕಾರಣಗಳಿಗಾಗಿ ಇಂದೋರ್‌ಗೆ ತೆರಳಿರುವುದರಿಂದ ಸದ್ಯಕ್ಕೆ ನಗರದಲ್ಲಿ ಲಭ್ಯವಿಲ್ಲ ಎಂದು ರಾಜಭವನದ ಮೂಲಗಳು ತಿಳಿಸಿವೆ. ಇದು ರಾಜೀನಾಮೆಯ ತಾಂತ್ರಿಕ ಪ್ರಕ್ರಿಯೆಯನ್ನು ಕೊಂಚ ವಿಳಂಬವಾಗಿಸಿದೆ.

error: Content is protected !!