ಕಾಸರಗೋಡು: ಕಾಸರಗೋಡು ಕರಾವಳಿಯ ನಡುಸಮುದ್ರದಲ್ಲಿ ಭಾನುವಾರ ಮುಂಜಾನೆ ಭೀಕರ ʻಹಿಟ್ ಅಂಡ್ ರನ್’ ಮಾದರಿಯ ಘಟನೆಯೊಂದು ಸಂಭವಿಸಿದೆ. ಆಳ ಸಮುದ್ರ ಮೀನುಗಾರಿಕೆ ಮುಗಿಸಿ ತಮಿಳುನಾಡಿಗೆ ಮರಳುತ್ತಿದ್ದ ಬೋಟ್‌ಗೆ ಬೃಹತ್ ಟಗ್ ನೌಕೆಯೊಂದು ಢಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಮೀನುಗಾರಿಕಾ ಬೋಟ್ ಸಂಪೂರ್ಣವಾಗಿ ಜಖಂಗೊಂಡಿದೆ. ಘಟನೆ ಸಂಭವಿಸಿದ ತಕ್ಷಣ ಧ್ವಂಸಗೊಂಡ ಬೋಟ್‌ನಲ್ಲಿದ್ದ ಮೀನುಗಾರರ ನೆರವಿಗೆ ಬಾರದೆ ಟಗ್ ನೌಕೆಯು ಪರಾರಿಯಾಗಿದೆ.


ತಮಿಳುನಾಡಿನ ಕನ್ಯಾಕುಮಾರಿ ಮೂಲದ ʻಸುಸನ್ನಾ’ ಹೆಸರಿನ ಆಳ ಸಮುದ್ರ ಮೀನುಗಾರಿಕಾ ಬೋಟ್ ಕಳೆದ ಏಪ್ರಿಲ್ 12ರಂದು ಕರಾವಳಿಯಿಂದ ಹೊರಟಿತ್ತು. ಮೇ 2ರಂದು ಗುಜರಾತ್ ತಲುಪಿ ಅಲ್ಲಿ ತಾವು ಹಿಡಿದ ಮೀನನ್ನು ಮಾರಾಟ ಮಾಡಿ, ಸುಮಾರು 6,000 ಕೆಜಿ ಮೀನಿನೊಂದಿಗೆ ಮರಳಿ ಸ್ವಗ್ರಾಮಕ್ಕೆ ಬರುತ್ತಿತ್ತು. ಭಾನುವಾರ ಮುಂಜಾನೆ 4:30ರ ಸುಮಾರಿಗೆ ಕಾಸರಗೋಡು ಕರಾವಳಿಯಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿ ಚಲಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಬೋಟ್‌ನಲ್ಲಿದ್ದ ತಂತ್ರಜ್ಞಾನದ (AIS) ಆಧಾರದ ಮೇಲೆ ಢಿಕ್ಕಿ ಹೊಡೆದ ನೌಕೆಯನ್ನು ʻಓಷನ್ ರೇಡಿಯನ್ಸ್’ ಎಂಬ ಬೃಹತ್ ಟಗ್ ಬೋಟ್ ಎಂದು ಗುರುತಿಸಲಾಗಿದೆ. ಢಿಕ್ಕಿಯ ರಭಸಕ್ಕೆ ಸುಸನ್ನಾ ಬೋಟ್‌ನ ಎಡಭಾಗ ಮತ್ತು ಹಿಂಭಾಗದ ಸ್ಟೀಲ್ ಕವಚ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗೆ ಸಮುದ್ರದ ನೀರು ನುಗ್ಗಲು ಆರಂಭಿಸಿತ್ತು. ಬೋಟ್‌ನಲ್ಲಿದ್ದ ಜೀವರಕ್ಷಕ ಉಪಕರಣಗಳಿದ್ದ ಬಾಕ್ಸ್ ಕೂಡ ಸಮುದ್ರಕ್ಕೆ ಬಿದ್ದಿದೆ. ಅದೃಷ್ಟವಶಾತ್ ಬೋಟ್ ಮುಳುಗಡೆಯಾಗದ ಕಾರಣ ಅದರಲ್ಲಿದ್ದ ಆರು ಜನ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಜಿ. ಸುಬಿನ್ ಎಂಬ ಮೀನುಗಾರ ಗಾಯಗೊಂಡಿದ್ದಾರೆ.

‘ಸಾರಿ’ ಎಂದು ಹೇಳಿ ಪರಾರಿಯಾದ ಟಗ್ ನೌಕೆಯ ಕ್ಯಾಪ್ಟನ್
ಅಪಘಾತ ಸಂಭವಿಸಿದ ತಕ್ಷಣ ಮಾನವೀಯತೆಯ ಆಧಾರದ ಮೇಲೆ ರಕ್ಷಣೆಗೆ ಬರಬೇಕಾಗಿದ್ದ ಟಗ್ ನೌಕೆಯು ಮೀನುಗಾರರನ್ನು ಕಷ್ಟಕ್ಕೆ ದೂಡಿ ಮುನ್ನಡೆದಿದೆ. ಈ ಬಗ್ಗೆ ರೇಡಿಯೋ ಸಂಪರ್ಕದ ಮೂಲಕ ಮೀನುಗಾರರು ಆಕ್ರೋಶ ಹೊರಹಾಕಿ, ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದಾಗ, ಟಗ್ ಕ್ಯಾಪ್ಟನ್ ಮೊದಲು “ನೀವು ನಮಗೆ ಕತ್ತಲಲ್ಲಿ ಕಾಣಿಸಲಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ. ಆ ಬಳಿಕ ಕೇವಲ “ಕ್ಷಮಿಸಿ (Sorry)” ಎಂದು ಸಂದೇಶ ಕಳುಹಿಸಿ ನೌಕೆಯನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಬೋಟ್ ಮಾಲೀಕರು ದೂರಿದ್ದಾರೆ.

ಅಪಘಾತದ ನಂತರ ಹಾನಿಗೊಳಗಾದ ಬೋಟ್ ಅನ್ನು ಮಂಗಳೂರಿನ ಕಡೆಗೆ ತರಲಾಯಿತಾದರೂ, ಘಟನಾ ಸ್ಥಳ ಕೇರಳದ ವ್ಯಾಪ್ತಿಗೆ ಬರುವುದರಿಂದ ಕಾಸರಗೋಡಿನ ಕುಂಬ್ಳೆ ಕರಾವಳಿ ಪೊಲೀಸ್ ಠಾಣೆಗೆ ದೂರು ನೀಡಲು ಸೂಚಿಸಲಾಯಿತು. ಸದ್ಯ ಬೋಟ್ ಅನ್ನು ಮಂಜೇಶ್ವರ ಮೀನುಗಾರಿಕಾ ಬಂದರಿನಲ್ಲಿ ತಂದು ಲಂಗರು ಹಾಕಲಾಗಿದೆ.

ಆದರೆ, ಕರಾವಳಿ ಪೊಲೀಸರು ಎಫ್‌ಐಆರ್ ದಾಖಲಿಸಲು ತೀವ್ರ ವಿಳಂಬ ಧೋರಣೆ ಅನುಸರಿಸಿದ್ದಾರೆ ಎಂದು ಮೀನುಗಾರರ ಸಂಘಟನೆಗಳು ಆರೋಪಿಸಿವೆ. ಭಾನುವಾರವೇ ದೂರು ನೀಡಿದ್ದರೂ, ಪೊಲೀಸರು ಕೇವಲ ಇನ್ಶೂರೆನ್ಸ್‌ಗಾಗಿ ವರದಿ ನೀಡುವುದಾಗಿ ಹೇಳಿ ತನಿಖೆಯಿಂದ ನುಣುಚಿಕೊಳ್ಳಲು ಯತ್ನಿಸಿದ್ದರು ಎನ್ನಲಾಗಿದೆ. ತೀವ್ರ ಒತ್ತಡದ ನಂತರ ಸೋಮವಾರ ಸಂಜೆ ಕುಂಬ್ಳೆ ಪೊಲೀಸರು ʻಓಷನ್ ರೇಡಿಯನ್ಸ್’ ಟಗ್ ಕ್ಯಾಪ್ಟನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 282 ರಡಿಯಲ್ಲಿ ನಿರ್ಲಕ್ಷ್ಯದ ಚಾಲನೆಯ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಇನ್ಶೂರೆನ್ಸ್ ಪ್ರಕ್ರಿಯೆ ಮುಗಿದ ಬಳಿಕ ಬೋಟ್ ಅನ್ನು ತಮಿಳುನಾಡಿಗೆ ಕೊಂಡೊಯ್ಯಲು ಮೀನುಗಾರರು ಸಿದ್ಧತೆ ನಡೆಸುತ್ತಿದ್ದಾರೆ.