
ಮಂಗಳೂರು: ಕರ್ನಾಟಕ ಕಾಂಗ್ರೆಸ್ ಸರಕಾರ ಅಕ್ರಮ ವಲಸಿಗರನ್ನು ರಕ್ಷಣೆ ಮಾಡಲು ಮುಂದಾಗಿದೆ. ಅವರಿಗೆ ಗ್ಯಾರಂಟಿ ಯೋಜನೆಯನ್ನು ಕೊಟ್ಟು ವೋಟ್ ಬ್ಯಾಂಕ್ ಮಾಡಲು ಸರಕಾರ ಮುಂದಾಗಿದ್ದು ಸಿದ್ದರಾಮಯ್ಯರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಡಿ.ಕೆ.ಶಿವಕುಮಾರ್ ಅವರು ದೇಶದ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುತ್ತಿದೆ. ಇದು ಆತಂಕಕಾರಿ ಸಂಗತಿಯಾಗಿದೆ“ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದ್ದಾರೆ.

”ಅಕ್ರಮ ವಲಸಿಗರು ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇದ್ದಾರೆ ಎನ್ನುವುದಕ್ಕೆ ಪೂರಕವಾಗಿ ನಿನ್ನೆ ಸುರತ್ಕಲ್ ನಲ್ಲಿ 8 ಮಂದಿ ಬಾಂಗ್ಲಾ ವಲಸಿಗರು ಸಿಕ್ಕಿಬಿದ್ದಿದ್ದಾರೆ. ಅವರನ್ನು ಇಲ್ಲಿಯೇ ಇರಿಸಿ ಅಕ್ರಮವಾಗಿ ದೇಶದ ದಾಖಲೆಗಳನ್ನು ನೀಡಿ ಕಾಂಗ್ರೆಸ್ ರಕ್ಷಣೆ ಮಾಡುತ್ತಿದೆ. ಇದು ಖಂಡನೀಯವಾಗಿದ್ದು ಇನ್ನಾದರೂ ರಾಜ್ಯ ಸರಕಾರ ಎಚ್ಚೆತ್ತು ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶಿಗರನ್ನು ಓಡಿಸಬೇಕು“ ಎಂದರು.
ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಮಾತಾಡಿ, “ಈ ದೇಶದಲ್ಲಿ ಹುಟ್ಟಿದ ಮುಸ್ಲಿಮರು ಕೂಡ ರಾಜ್ಯ ಸರಕಾರದ ಈ ಯೋಜನೆಯನ್ನು ವಿರೋಧಿಸಬೇಕು. ಎಲ್ಲೆಲ್ಲಿಂದ ಬಂದವರಿಗೆ ವಾಸ್ತವ್ಯ ಸರ್ಟಿಫಿಕೇಟ್ ಕೊಡುವುದಾದರೆ ಇಲ್ಲಿನ ಮುಸ್ಲಿಮರಿಗೆ ನಾಳಿನ ದಿನಗಳಲ್ಲಿ ರಾಜ್ಯ ಸರಕಾರ ಕೊಡುವ ಗ್ಯಾರಂಟಿ ಯೋಜನೆಗಳಿಗೆ ಕೊಕ್ಕೆ ಬೀಳುವುದು ಗ್ಯಾರಂಟಿ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು“ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಪೂಜಾ ಪೈ, ವಸಂತ ಜೆ. ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
