
ಬಂಟ್ವಾಳ: ಅಪರಿಚಿತ ವಾಹನವೊಂದು ಢಿಕ್ಕಿಯಾಗಿ ಬೈಕ್ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಫರಂಗಿಪೇಟೆ ಸಮೀಪದ ಕಡೆಗೋಳಿ ಎಂಬಲ್ಲಿ ಇಂದು(ಮೇ 27) ಮುಂಜಾನೆ ನಡೆದಿದೆ.

ಬಜಪೆ ಕೈಕಂಬ ನಿವಾಸಿ ಅಭಿಜಿತ್ (28) ಮೃತ ಸವಾರ. ಸಂದೀಪ್ ಗಂಭೀರವಾಗಿ ಗಾಯಗೊಂಡ ಸಹಸವಾರ.

ಅಭಿಜಿತ್ ಅವರು ಸ್ನೇಹಿತ ಸಂದೀಪ್ ಅವರನ್ನು ಬೈಕಿನಲ್ಲಿ ಬಂಟ್ವಾಳದ ಅಮ್ಟಾಡಿಯ ಮನೆಗೆ ಬಿಟ್ಟು ಬರಲು ಹೋಗುತ್ತಿದ್ದರು. ಈ ವೇಳೆ ಮುಂಜಾನೆ 3 ಗಂಟೆ ಸುಮಾರಿಗೆ ಫರಂಗಿಪೇಟೆ ಸಮೀಪದ ಕಡೆಗೋಳಿ ಎಂಬಲ್ಲಿ ಅಪರಿಚಿತ ವಾಹನವೊಂದು ಬೈಕ್‌ಗೆ ಹಿಂಬದಿಯಿಂದ ಢಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಹೇಳಲಾಗಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಪಲ್ಟಿಯಾಗಿದ್ದು ಅಭಿಜಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಂದೀಪ್ ಗಂಭೀರವಾಗಿ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.