
ತೆಲಂಗಾಣ: ಅಪ್ರಾಪ್ತ ಬಾಲಕಿ ಅತ್ಯಾಚಾರ ಕೇಸಲ್ಲಿ ಜೈಲು ಸೇರಿದ್ದ ಕಾಮುಕ ಜಾಮೀನಿನ ಮೇಲೆ ಹೊರಬಂದು ಮತ್ತೆ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದಲ್ಲದೆ ತನ್ನ ಪತ್ನಿ ಮಕ್ಕಳ ಸಹಿತ 6 ಜನರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಂಗಾರೆಡ್ಡಿ ಜಿಲ್ಲೆಯ ಶಾಬಾದ್‌ನಲ್ಲಿ ನಡೆದಿದೆ.
ಘಟನೆಯ ವಿವರ:
ರಾಜ್‌ಕುಮಾರ್ (35) ಈ ಪಾಶವೀ ಕೃತ್ಯದ ಆರೋಪಿಯಾಗಿದ್ದಾನೆ. ಈತ ತನ್ನ ಪತ್ನಿ ಪಾರ್ವತಿ ಸರಿತಾ (30) ಹಾಗೂ 4 ಮತ್ತು 1 ವರ್ಷದ ಇಬ್ಬರು ಗಂಡು ಮಕ್ಕಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ಅತ್ಯಾಚಾರ ದೂರು ದಾಖಲಿಸಿದ್ದ 17 ವರ್ಷದ ಬಾಲಕಿಯ ಮನೆಗೆ ತೆರಳಿ ಅವಳನ್ನು ಕಾರಿನಲ್ಲಿ ನಿರ್ಜನ ಸ್ಥಳಕ್ಕೆ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಬಾಲಕಿಯನ್ನು ಅಪಹರಿಸುವ ಮುನ್ನ ಆಕೆಯ 45 ವರ್ಷದ ತಾಯಿ ಮತ್ತು 65 ವರ್ಷದ ಅಜ್ಜಿಯನ್ನು ಸಹ ಹತ್ಯೆ ಮಾಡಿದ್ದಾನೆ. ಘಟನೆಯ ಸಮಯದಲ್ಲಿ ಅಂಗವಿಕಲಳಾದ ಆಕೆಯ 20 ವರ್ಷದ ಸಹೋದರಿ ಕೂಡ ಮನೆಯಲ್ಲಿದ್ದಳು. ಆದರೆ ಆರೋಪಿ ಆಕೆಗೆ ಯಾವುದೇ ಹಾನಿ ಮಾಡಿಲ್ಲ.

ಬಳಿಕ ರಾಜ್‌ಕುಮಾರ್ ತನ್ನ ತಂದೆಗೆ ಕರೆ ಮಾಡಿ ಹತ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಅಲ್ಲದೇ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ಎಸ್ಕೇಪ್ ಆಗಿದ್ದಾಗಿ ಹಿರಿಯ ಪೊಲೀಸ್ ಅಧಿಕಾರಿ ತರುಣ್ ಜೋಶಿ ಮಾಹಿತಿ ನೀಡಿದ್ದಾರೆ.
ಈ ವರ್ಷ ಮೇ ತಿಂಗಳಲ್ಲಿ ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಜ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ನಂತರ ಆರೋಪಿ ಪರಾರಿಯಾಗಿದ್ದ.

7 ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆಯ ಸೆಕ್ಷನ್‌ಗಳಲ್ಲಿ ಪ್ರಕರಣ ದಾಖಲಾಗಿದ್ದರಿಂದ, ಆರೋಪಿ 20,000 ರೂ. ವೈಯಕ್ತಿಕ ಬಾಂಡ್ ಮೇಲೆ ನಿರೀಕ್ಷಣಾ ಜಾಮೀನು ಪಡೆದಿದ್ದ.
