
ಉಡುಪಿ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಎಡಭಾಗದ ಸ್ಟಬ್ ಆ್ಯಕ್ಸಲ್ ಕಟ್ಟಾಗಿ, ಟಯರ್ ಕಳಚಿ ಬಿದ್ದ ಪರಿಣಾಮ ಬಸ್ ಎಡಕ್ಕೆ ವಾಲಿ ನಿಂತ ಘಟನೆ ಕಿನ್ನಿಮೂಲ್ಕಿ ಬಳಿಯ ಉಡುಪಿ ಸ್ವಾಗತ ಗೋಪುರದ ಸಮೀಪ ನಡೆದಿದೆ.

ಮಂಗಳೂರಿನಿಂದ ಬೆಳಗಾವಿ ಜಿಲ್ಲೆಯ ಅಂಕಲಗಿಗೆ ತೆರಳುತ್ತಿದ್ದ ವೇಳೆ, ಬಸ್ ಕಿನ್ನಿಮೂಲ್ಕಿಯ ಉಡುಪಿ ಪ್ರವೇಶ ದ್ವಾರದ ಬಳಿ ತಲುಪುತ್ತಿದ್ದಂತೆ ಟಯರ್ ಒಂದು ಕಡೆಗೆ ವಾಲುವುದನ್ನು ಚಾಲಕ ಗಮನಿಸಿದ್ದಾರೆ. ಕೂಡಲೇ ಅವರು ಬಸ್ಸನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಬಿರುಕು ಬಿಟ್ಟಿದ್ದ ಸ್ಟಬ್ ಆ್ಯಕ್ಸಲ್ ಸಂಪೂರ್ಣವಾಗಿ ಮುರಿದುಹೋಗಿ ಟಯರ್ ವಾಹನದಿಂದ ಕಳಚಿ ಹೊರಗೆ ಬಿದ್ದಿದ್ದು,ಬಸ್ಸು ರಸ್ತೆಯಲ್ಲೇ ಎಡಭಾಗಕ್ಕೆ ವಾಲಿ ನಿಂತಿದೆ.

ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ಘಟನೆ ನಡೆದ ಅರ್ಧ ಗಂಟೆಯೊಳಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪರ್ಯಾಯ ಬಸ್ಸಿನ ವ್ಯವಸ್ಥೆ ಮಾಡಿ, ಪ್ರಯಾಣಿಕರನ್ನು ಅಂಕಲಗಿಗೆ ಕರೆದೊಯ್ಯಲಾಗಿದೆ.

ಇದೇ ಬಸ್ಸಿನ ಸ್ಟಬ್ ಆ್ಯಕ್ಸಲ್ ಸುಮಾರು ಮೂರು ತಿಂಗಳ ಹಿಂದೆಯೂ ಮುರಿದಿತ್ತು ಎನ್ನಲಾಗಿದೆ. ಆಗ ಅದನ್ನು ರಿಪೇರಿ ಮಾಡಿ ಮತ್ತೆ ಸೇವೆಗೆ ಬಳಸಲಾಗುತ್ತಿತ್ತು. ಘಟನೆಗೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.