ಅಮ್ಮಾ ನಾನು ಬರ್ತಿದ್ದೀನಿ!: 20 ವರ್ಷಗಳ ಕಣ್ಣೀರು, 34 ಕೋಟಿಯ ಕರುಣೆ: ಸೌದಿ ಜೈಲಿನಿಂದ ಅಬ್ದುಲ್ ರಹೀಮ್ ಬಿಡುಗಡೆಗೆ ಕ್ಷಣಗಣನೆ!

ರಿಯಾದ್: ಆ ಹೆತ್ತ ಕರುಳಿನ ಎರಡು ದಶಕಗಳ ಕಣ್ಣೀರಿಗೆ ಕೊನೆಗೂ ಕಾಲ ಒಲಿದಿದೆ. ಹೆತ್ತ ಮಗನ ಮುಖ ನೋಡಲು ಇಪ್ಪತ್ತು ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಆ ತಾಯಿಯ ಪ್ರಾರ್ಥನೆಗೆ ದೈವ ಧ್ವನಿಯಾಗಿದೆ. ಸೌದಿ ಅರೇಬಿಯಾದ ಕತ್ತಲ ಕೋಣೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಮರಣದಂಡನೆಯ ತೂಗುಗತ್ತಿಯಡಿಯಲ್ಲಿ ದಿನದೂಡುತ್ತಿದ್ದ ಕೇರಳದ ಕೋಝಿಕ್ಕೋಡ್ ನಿವಾಸಿ ಅಬ್ದುಲ್ ರಹೀಮ್ ಬಿಡುಗಡೆಯ ಅಧಿಕೃತ ಆದೇಶಕ್ಕೆ ಸೌದಿ ಅಧಿಕಾರಿಗಳು ಸಹಿ ಹಾಕಿದ್ದಾರೆ. ಅವರ ಎಕ್ಸಿಟ್ ವೀಸಾ ಪ್ರಕ್ರಿಯೆ ಮುಗಿದಿದ್ದು, ತಾಯ್ನಾಡಿನ ಮಣ್ಣನ್ನು ಮುತ್ತಿಡಲು ಕೇವಲ ವಲಸೆ ಪ್ರಕ್ರಿಯೆಗಳಷ್ಟೇ ಬಾಕಿ ಉಳಿದಿವೆ.

“ಒಂದು ಸಣ್ಣ ಅಪಘಾತ… ಒಂದು ಜೀವದ ಕಣ್ಣೀರು… ಮತ್ತೊಂದು ಯೌವನದ ಇಡೀ ಬದುಕನ್ನೇ ಕಸಿದುಕೊಂಡ ದುರಂತ ಕಥೆಯಿದು.”

ಅದು 2006ರ ಸಮಯ. ಬಡತನದ ಬೇಗೆಯನ್ನು ನೀಗಿಸಲು, ಕುಟುಂಬಕ್ಕೆ ಆಸರೆಯಾಗಲು ಮರುಭೂಮಿಯ ನಾಡಿಗೆ ಹಾರಿದ್ದ ರಹೀಮ್‌ಗೆ ವಿಧಿ ಕ್ರೂರವಾಗಿ ಆಟವಾಡಿತು. ತಾನು ಆರೈಕೆ ಮಾಡುತ್ತಿದ್ದ ವಿಶೇಷ ಚೇತನ ಮಗುವಿನ ಆಕಸ್ಮಿಕ ಸಾವು ರಹೀಮ್ ಬದುಕನ್ನೇ ನರಕವಾಗಿಸಿತು. ಅದೊಂದು ಉದ್ದೇಶಪೂರ್ವಕ ಕೊಲೆಯಲ್ಲ, ದುರದೃಷ್ಟಕರ ಅಪಘಾತ ಎಂದು ರಹೀಮ್ ಎಷ್ಟೇ ಅತ್ತರೂ, ನ್ಯಾಯಾಲಯ 2012ರಲ್ಲಿ ಅವರಿಗೆ ಮರಣದಂಡನೆ ವಿಧಿಸಿತ್ತು. ಅಂದಿನಿಂದ ಇಂದಿನವರೆಗೆ, ಅಂದರೆ ಸರಿಸುಮಾರು 20 ವರ್ಷಗಳ ಕಾಲ ರಹೀಮ್ ಕಳೆದ ಪ್ರತಿಯೊಂದು ಸೆಕೆಂಡೂ ಸಾವಿನ ಭಯದಲ್ಲೇ ಕಳೆದಿತ್ತು. ಕಣ್ಣೀರಲ್ಲೇ ದಿನ ಕಳೆಯುತ್ತಿದ್ದ ಆ ಜೀವಕ್ಕೆ ಜೈಲಿನ ಗೋಡೆಗಳೇ ಪ್ರಪಂಚವಾಗಿದ್ದವು.

ಮಾನವೀಯತೆಯ ಮಹಾ ಸಂಗಮ: 34 ಕೋಟಿ ಒಟ್ಟುಗೂಡಿಸಿದ ಜಾಗತಿಕ ಕರುಣೆ
ಇತ್ತ ಭಾರತದಲ್ಲಿ ಮಗನ ಮುಖ ನೋಡಲು ಕಣ್ಣೀರು ಬತ್ತಿಹೋಗಿದ್ದ ಆ ತಾಯಿಯ ಆರ್ತನಾದ ಇಡೀ ಕೇರಳದ ವಲಸೆ ಸಮುದಾಯವನ್ನು ಬಡಿದೆಬ್ಬಿಸಿತು. ಸೌದಿ ಉದ್ಯೋಗದಾತರ ಕುಟುಂಬ ಮರಣದಂಡನೆ ರದ್ದುಗೊಳಿಸಲು ಕೇಳಿದ್ದು ಬರೋಬ್ಬರಿ 15 ಮಿಲಿಯನ್ ಸೌದಿ ರಿಯಾಲ್ (ಅಂದಾಜು 34 ಕೋಟಿ ರೂಪಾಯಿ) ರಕ್ತದ ಹಣ (ದಿಯಾ)! ಒಬ್ಬ ಸಾಮಾನ್ಯ ಬಡ ಯುವಕನಿಗೆ ಇದು ತಲುಪಲು ಸಾಧ್ಯವೇ?

ಆದರೆ ಅಲ್ಲಿ ಜಾಗತಿಕ ಮಟ್ಟದಲ್ಲಿ ಮಾನವೀಯತೆಯ ಮಹಾ ಪವಾಡವೇ ನಡೆದುಹೋಯಿತು. ಜಾತಿ, ಮತ, ಧರ್ಮದ ಭೇದ ಮರೆತು ಹರಿದುಬಂದ ಹಣದ ಮಹಾಪೂರ ರಹೀಮ್ ಬದುಕಿಗೆ ಮರುಜೀವ ನೀಡಿತು. 2024ರಲ್ಲಿ ಸಂಗ್ರಹವಾದ ಆ ʻಕರುಣೆಯ ಹಣ’ವನ್ನು ಕಂಡು ಸಂತ್ರಸ್ತ ಕುಟುಂಬ ಮರಣದಂಡನೆ ಹಿಂಪಡೆಯಲು ಒಪ್ಪಿದಾಗ, ಇಡೀ ಭಾರತವೇ ನಿಟ್ಟುಸಿರು ಬಿಟ್ಟಿತ್ತು.

ಮುಗಿದ ಜೈಲು ಶಿಕ್ಷೆ; ಅಮ್ಮನ ಮಡಿಲು ಸೇರಲು ಕ್ಷಣಗಣನೆ
ಜುಲೈ 2024ರಲ್ಲಿ ಮರಣದಂಡನೆ ರದ್ದಾದರೂ, ಸಾರ್ವಜನಿಕ ಹಕ್ಕುಗಳ ಕಾಯ್ದೆಯಡಿ ವಿಧಿಸಲಾಗಿದ್ದ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮೇ 19ರ ಮಧ್ಯರಾತ್ರಿ ಕೊನೆಗೊಂಡಿದೆ. ಈದ್ ರಜೆಯ ಕಾರಣದಿಂದ ಪ್ರಕ್ರಿಯೆ ತುಸು ತಡವಾದರೂ, ಸದ್ಯ ರಹೀಮ್ ಅವರನ್ನು ಬಿಡುಗಡೆಗೊಳಿಸಿ ಗಡೀಪಾರು ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಇಪ್ಪತ್ತು ವರ್ಷಗಳ ಹಿಂದೆ ಕಪ್ಪನೆಯ ಗಡ್ಡ, ಯೌವನದ ರಕ್ತದೊಂದಿಗೆ ಸೌದಿಗೆ ಹೋಗಿದ್ದ ರಹೀಮ್, ಇಂದು ತಲೆಗೂದಲು ನರೆತು, ಬದುಕಿನ ಅರ್ಧ ಆಯುಷ್ಯವನ್ನು ಜೈಲಿನಲ್ಲೇ ಕಳೆದು ವೃದ್ಧಾಪ್ಯದ ಹೊಸ್ತಿಲಲ್ಲಿ ನಿಂತಿದ್ದಾರೆ. ಆದರೇನು, ಕಳೆದುಹೋದ ಯೌವನ ಮರಳಿ ಬರದಿದ್ದರೂ, ಹೆತ್ತ ಒಡಲನ್ನು ತಬ್ಬಿ ಅಳುವ ಆ ಒಂದು ಕ್ಷಣಕ್ಕಾಗಿ ರಹೀಮ್ ಮತ್ತು ಅವರ ಕುಟುಂಬ ಕಾಯುತ್ತಿದೆ. ಶೀಘ್ರದಲ್ಲೇ ಅವರು ಭಾರತದ ಮಣ್ಣಿಗೆ ಕಾಲಿಡಲಿದ್ದು, ಇಪ್ಪತ್ತು ವರ್ಷಗಳ ಸುದೀರ್ಘ ಕಣ್ಣೀರಿನ ಕಥೆಗೆ ಸುಖಾಂತ್ಯ ಸಿಗಲಿದೆ.

error: Content is protected !!