ಉಡುಪಿ: ಮಾಜಿ ರೌಡಿಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಆಶೀರ್ವಾದ? ವಿಡಿಯೋ ವೈರಲ್!

ಉಡುಪಿ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಮತ್ತೊಮ್ಮೆ ಹೊಸ ವಿವಾದದ ಸುಳಿಗೆ ಸಿಲುಕಿದ್ದಾರೆ. ಮಾಜಿ ರೌಡಿ ಶೀಟರ್ ಸೋನು ಸುಧೀರ್ ಎಂಬಾತನಿಗೆ ಅವರು ಆಶೀರ್ವದಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

.

ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ, ಡಾ. ನಾಗಲಕ್ಷ್ಮಿ ಚೌಧರಿ ಅವರು ಕಾರಿನೊಳಗೆ ಕುಳಿತಿದ್ದಾರೆ. ಈ ವೇಳೆ ಕಾರಿನ ಬಳಿ ಬಂದ ಸೋನು ಸುಧೀರ್ ತಲೆ ಬಾಗಿದಾಗ, ನಾಗಲಕ್ಷ್ಮಿ ಚೌಧರಿ ಅವರು ಆತನ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಈ ದೃಶ್ಯಗಳು ಈಗ ಇಂಟರ್ನೆಟ್‌ನಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದು, ನೆಟ್ಟಿಗರು ಮಹಿಳಾ ಆಯೋಗದ ಅಧ್ಯಕ್ಷರ ನಡೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ವರದಿಗಳ ಪ್ರಕಾರ, ಆಶೀರ್ವಾದ ಪಡೆದ ಸೋನು ಸುಧೀರ್ ಸಾಮಾನ್ಯ ವ್ಯಕ್ತಿಯಲ್ಲ, ಆತನ ವಿರುದ್ಧ ಎರಡು ಪ್ರಮುಖ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೆ, 2021 ರಿಂದ 2023 ರ ಅವಧಿಯಲ್ಲಿ ಕಾಪು ಪೊಲೀಸ್ ಠಾಣೆಯ ರೌಡಿ ಶೀಟರ್ ಪಟ್ಟಿಯಲ್ಲೂ ಈತನ ಹೆಸರು ಇತ್ತು ಎಂದು ಹೇಳಲಾಗಿದೆ. ಇಂತಹ ಹಿನ್ನೆಲೆಯುಳ್ಳ ವ್ಯಕ್ತಿಯೊಂದಿಗೆ ಸಾಂವಿಧಾನಿಕ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಕಾಣಿಸಿಕೊಂಡಿರುವುದು ಸಾರ್ವಜನಿಕರ ಹುಬ್ಬೇರಿಸುವಂತೆ ಮಾಡಿದೆ.

ಡಾ. ನಾಗಲಕ್ಷ್ಮಿ ಚೌಧರಿ ಅವರು ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ಪ್ರವಾಸದ ವೇಳೆಯೇ ಈ ಘಟನೆ ನಡೆದಿದೆ ಎನ್ನಲಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಾರ್ವಜನಿಕ ಅಧಿಕಾರಿಗಳು ಮತ್ತು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ನಡುವೆ ಇಂತಹ ಸಂಪರ್ಕಗಳು ಇವೆಯೇ? ಎಂದು ಸಾರ್ವಜನಿಕರು ಹಾಗೂ ನೆಟಿಜಿನ್ಸ್ ಪ್ರಶ್ನಿಸುತ್ತಿದ್ದಾರೆ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಇಂತಹ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ, ವಿವಾದಿತ ಸಂಘಟನೆಯ ಪುನೀತ್ ಕೆರೆಹಳ್ಳಿ ಎಂಬಾತನನ್ನು ಭೇಟಿಯಾಗಿ, ಆತನಿಗೆ ಶುಭ ಹಾರೈಸಿದ್ದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಆ ವಿವಾದ ತಣ್ಣಗಾಗುವ ಮುನ್ನವೇ ಈಗ ಉಡುಪಿಯ ಮಾಜಿ ರೌಡಿ ಶೀಟರ್ ಜೊತೆಗಿನ ವಿಡಿಯೋ ಮುನ್ನೆಲೆಗೆ ಬಂದಿದ್ದು, ವಿವಾದದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

error: Content is protected !!