
ಬೆಂಗಳೂರು: ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬೇಕರಿಯ ತಿಂಡಿ-ತಿಸಿಸು ಅಚ್ಚುಮೆಚ್ಚು. ಆದರೆ ವಿವಿಧ ಬೇಕರಿ ಉತ್ಪನ್ನಗಳು ಹಾಗೂ ಚಿಪ್ಸ್‌ಗಳಲ್ಲಿ ಮಿತಿಮೀರಿ ವಿಷಕಾರಿ ಹಾಗೂ ಕ್ಯಾನ್ಸರ್ ಕಾರಕ ರಾಸಾಯನಿಕ ಬಣ್ಣಗಳನ್ನು ಬಳಸುತ್ತಿರುವುದು ಪತ್ತೆಯಾಗಿರುವುದಾಗಿ ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕೃತವಾಗಿ ಘೋಷಿಸಿದೆ.

ಆಹಾರ ಸುರಕ್ಷತಾ ಅಧಿಕಾರಿಗಳು ರಾಜ್ಯದ ಮೂಲೆ ಮೂಲೆಗಳ ಬೇಕರಿಗಳಿಂದ ಬರೋಬ್ಬರಿ 35,639 ಆಹಾರದ ಮಾದರಿಗಳನ್ನು ಸಂಗ್ರಹಿಸಿ ರಾಸಾಯನಿಕ ವಿಶ್ಲೇಷಣಾ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಪ್ರಸ್ತುತ ಬಂದಿರುವ ಲ್ಯಾಬ್ ವರದಿಯ ಪ್ರಕಾರ, ಬಹುತೇಕ ಬೇಕರಿ ತಿನಿಸುಗಳು ಮತ್ತು ಚಿಪ್ಸ್‌ಗಳಲ್ಲಿ ನಿಷೇಧಿತ ಹಾಗೂ ಮಿತಿಮೀರಿದ ರಾಸಾಯನಿಕ ಬಣ್ಣಗಳನ್ನು ಮಿಶ್ರಣ ಮಾಡಲಾಗುತ್ತಿದೆ. ಈ ತಿನಿಸುಗಳಲ್ಲಿ ಮಿತಿಮೀರಿ ವಿಷಕಾರಿ ಹಾಗೂ ಕ್ಯಾನ್ಸರ್ ಕಾರಕ ರಾಸಾಯನಿಕ ಬಣ್ಣಗಳನ್ನು ಬಳಸುತ್ತಿರುವುದಾಗಿ ದೃಢಪಟ್ಟಿದ್ದು, ಸಾರ್ವಜನಿಕರ ಆರೋಗ್ಯದ ಬಗ್ಗೆ ತೀವ್ರ ಆತಂಕ ಮೂಡಿಸಿದೆ.

ಆಹಾರ ಇಲಾಖೆಯ ವರದಿ ಪ್ರಕಟವಾದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ನಿಯಮ ಉಲ್ಲಂಘಿಸಿ ವಿಷಕಾರಿ ರಾಸಾಯನಿಕಗಳನ್ನು ಬಳಸುತ್ತಿರುವ ಇಂತಹ ಬೇಜವಾಬ್ದಾರಿ ತಯಾರಕರ ಮತ್ತು ಬೇಕರಿ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಂತಹ ತಯಾರಕರ ಪರವಾನಗಿ ರದ್ದುಪಡಿಸಿ, ಅಂಗಡಿಗಳನ್ನು ತಕ್ಷಣವೇ ಮುಚ್ಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
