ನವದೆಹಲಿ: ಭಾರತೀಯ ಇಂಟರ್ನೆಟ್ ಲೋಕದಲ್ಲಿ ರಾಜಕೀಯ ಟ್ರೋಲ್‌ಗಳು ಮತ್ತು ವಿಡಂಬನೆಗಳು (Parody) ಈಗ ಹೊಸದೊಂದು ಉಗ್ರ ಸ್ವರೂಪ ಪಡೆದುಕೊಂಡಿವೆ! ನೆಟ್ಟಿಗರನ್ನೇ ಇಬ್ಬಾಗ ಮಾಡಿರುವ 2026ರ ಅತ್ಯಂತ ದೊಡ್ಡ ಡಿಜಿಟಲ್ ರಾಜಕೀಯ ವಿದ್ಯಮಾನವೊಂದರಲ್ಲಿ, ಕೋಟ್ಯಂತರ ಫಾಲೋವರ್ಸ್ ಹೊಂದಿರುವ ವೈರಲ್ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ವಿರುದ್ಧ ಈಗ ‘ಒಗ್ಗಿ ಜನತಾ ಪಾರ್ಟಿ’ (OJP) ಎಂಬ ಹೊಸ ಪೆರೋಡಿ ಒಕ್ಕೂಟ ಸಿಡಿದೆದ್ದಿದೆ. ಕಾರ್ಟೂನ್ ಪ್ರಪಂಚದ ಜನ್ಮಜಾತ ಶತ್ರುಗಳಾದ ಬೆಕ್ಕು ಮತ್ತು ಜಿರಳೆಗಳ ಯುದ್ಧ, ಈಗ ಭಾರತದ ಇಂಟರ್ನೆಟ್ ರಾಜಕಾರಣದಲ್ಲಿ ರಣರಂಗ ಸೃಷ್ಟಿಸಿದೆ!

ಮಿಲಿಯನ್ ಗಟ್ಟಲೆ ಫಾಲೋವರ್ಸ್ ಸಂಪಾದಿಸಿ ಜಗತ್ತಿಗೆಲ್ಲ ತಾವು ‘ತಟಸ್ಥ ರಾಜಕೀಯ ಆಂದೋಲನ’ ಎಂದು ಬಿಂಬಿಸಿಕೊಳ್ಳುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಹಿಂದಿರುವ ಅಸಲಿ ಮುಖವಾಡವನ್ನು ಸೀಳುವುದೇ ನಮ್ಮ ಮುಖ್ಯ ಅಜೆಂಡಾ ಎಂದು ಒಗ್ಗಿ ಜನತಾ ಪಾರ್ಟಿ (OJP) ಗರ್ಜಿಸಿದೆ.

ಸಿಜೆಪಿ ಸಂಸ್ಥಾಪಕ, 30 ವರ್ಷದ ಬೋಸ್ಟನ್ ಯೂನಿವರ್ಸಿಟಿ ವಿದ್ಯಾರ್ಥಿ ಅಭಿಜೀತ್ ದಿಪ್ಕೆ ಹಿಂದೆ ಆಮ್ ಆದ್ಮಿ ಪಾರ್ಟಿ (AAP) ಐಟಿ ಸೆಲ್‌ನ ಕೈವಾಡವಿದೆ ಎಂಬುದನ್ನು ಒಗ್ಗಿ ಪಾರ್ಟಿ ಹೇಳಿಕೊಂಡಿದೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೊತೆ ದಿಪ್ಕೆ ಇರುವ ಹಳೇ ಪೋಸ್ಟ್‌ಗಳು ಹಾಗೂ “ಎಎಪಿ ಪರ ನನ್ನ ಬದ್ಧತೆ ಎಂದಿಗೂ ಕಡಿಮೆ ಆಗಲ್ಲ” ಎಂದು ಆತ ಬರೆದುಕೊಂಡಿದ್ದ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡು ಒಗ್ಗಿ ಪಡೆ ಭಾರಿ ಆಕ್ರೋಶ ಹೊರಹಾಕಿದೆ.

ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇಡೀ ಕಾಕ್ರೋಚ್ ಪಡೆಯ ವಿರುದ್ಧ ಯುದ್ಧ ಸಾರಿರುವ ಒಗ್ಗಿ ಜನತಾ ಪಾರ್ಟಿ, “ಯಾವುದೇ ಜಿರಳೆ ಇರಲಿ, ಎಷ್ಟೇ ದೊಡ್ಡ ಸೈಜ್ ಇರಲಿ, ಯಾವ ಪ್ರಭೇದದ್ದೇ ಇರಲಿ… ಎಲ್ಲವನ್ನೂ ಕೊಂದು ಮುಗಿಸುವುದೇ ಒಜೆಪಿಯ ಏಕೈಕ ಗುರಿ” ಎಂದು ಅತ್ಯಂತ ತೀಕ್ಷ್ಣವಾಗಿ ಬರೆದುಕೊಂಡಿದೆ. ತನ್ನ ಇನ್‌ಸ್ಟಾಗ್ರಾಮ್ ಬಯೋದಲ್ಲಿ, “ಅಮೆರಿಕ ಮೂಲದ CJP ತರ ನಮಗೆ ಯಾವುದೇ ರಾಜಕೀಯ ಪಕ್ಷದ ಹಿಂಬಾಲಕರಿಲ್ಲ. ಕೇವಲ ಕಠೋರ ಸತ್ಯಗಳು ಮಾತ್ರ ಇಲ್ಲಿ ಸಿಗುತ್ತವೆ. ಪ್ರತಿಯೊಂದನ್ನೂ ಪ್ರಶ್ನಿಸಿ, ಯಾವುದನ್ನೂ ಆರಾಧಿಸಬೇಡಿ” ಎಂದು ನೇರವಾಗಿಯೇ ಸವಾಲು ಹಾಕಿದೆ.

ಕೇವಲ ಟ್ರೋಲ್ ಮಾಡುವುದಷ್ಟೇ ಅಲ್ಲದೆ, ದೇಶದ ಸದ್ಯದ ರಾಜಕೀಯ ವ್ಯವಸ್ಥೆಯ ಇಬ್ಬಂದಿತನಕ್ಕೆ ಒಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ದೇಶದಲ್ಲಿ ಕಸ ಗುಡಿಸುವ ಪ್ಯೂನ್ ಕೆಲಸಕ್ಕೂ ಡಿಗ್ರಿ ಕೇಳುತ್ತಾರೆ, ಆದರೆ ದೇಶ ಆಳುವ ಕಾನೂನು ನಿರೂಪಕರಿಗೆ ಯಾವುದೇ ವಿದ್ಯಾರ್ಹತೆ ಇಲ್ವಾ?” ಎಂದು ಪ್ರಶ್ನಿಸಿರುವ ಒಜೆಪಿ, ತನ್ನ ಪ್ರಣಾಳಿಕೆಯಲ್ಲಿ ರಾಜಕಾರಣಿಗಳಿಗೆ ಕನಿಷ್ಠ ಪದವಿ, ಸಂವಿಧಾನದ ಜ್ಞಾನ ಮತ್ತು ನೈತಿಕ ಹೊಣೆಗಾರಿಕೆಯನ್ನು ಕಡ್ಡಾಯಗೊಳಿಸುವುದಾಗಿ ಘೋಷಿಸಿದೆ. ಇದಲ್ಲದೆ, ಉಚಿತ ಪ್ರಾಣಿ ಆರೋಗ್ಯ ಸೇವೆ ಹಾಗೂ ಪ್ರಾಣಿ ಹಿಂಸೆಗೆ ಕೇವಲ 50 ರೂಪಾಯಿ ದಂಡ ವಿಧಿಸುವ ಭಾರತದ ದುರ್ಬಲ ಕಾನೂನಿನ ವಿರುದ್ಧ ಕಿಡಿಕಾರಿದ್ದು, ಗೋಹತ್ಯೆ ಮತ್ತು ಗೋಮಾಂಸ ರಫ್ತನ್ನು ಸಂಪೂರ್ಣ ನಿಷೇಧಿಸುವುದಾಗಿ ಭರವಸೆ ನೀಡಿದೆ.

ಜಿರಳೆಗಳ ಕಾಟಕ್ಕೆ ಬೇಸತ್ತ ಒಗ್ಗಿ ಬೆಕ್ಕಿನ ಮಾಸ್ಕಟ್ ಹೊಂದಿರುವ ಒಗ್ಗಿ ಜನತಾ ಪಾರ್ಟಿ (OJP) ಯ ಈ ದಿಢೀರ್ ದಾಳಿಯಿಂದಾಗಿ ಕಾಕ್ರೋಚ್ ಜನತಾ ಪಾರ್ಟಿಯ ಫಾಲೋವರ್ಸ್ ಕಂಗಾಲಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ “ಭ್ರಷ್ಟಾಚಾರ ಮುಕ್ತ ಭಾರತ” ಎಂಬ ಘೋಷಣೆಯೊಂದಿಗೆ ನುಗ್ಗಿರುವ ಒಜೆಪಿಯ ಈ ಆಕ್ರೋಶಭರಿತ ಡಿಜಿಟಲ್ ಕ್ರಾಂತಿ, ಭಾರತದ ಇಂಟರ್ನೆಟ್ ಜಗತ್ತಿನಲ್ಲಿ ಹಳೆಯ ಪೆರೋಡಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ಸಜ್ಜಾಗಿದೆ.
