
ಬೆಳಗಾವಿ: ಬೈಕ್ ಹಾಗೂ ಟಂಟಂ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ರೈಲ್ವೆ ಸ್ಟೇಷನ್ ಸಮೀಪ ಸೋಮವಾರ(ಮೇ 25) ರಾತ್ರಿ 7 ಗಂಟೆ ಸುಮಾರಿಗೆ ನಡೆದಿದೆ ಎನ್ನಲಾಗಿದೆ.

ರಾಯಬಾಗ ತಾಲೂಕಿನ ಬೋಮ್ಮನಾಳ ಗ್ರಾಮದ ನಿವಾಸಿಗಳಾದ ಮಹಾಂತೇಶ ಮಾನೆ (27), ಪತ್ನಿ ಪಾಯಲ ಮಾನೆ (23) ಹಾಗೂ 9 ತಿಂಗಳ ಮಗು ಸಮರ್ಥ್ ಮಾನೆ ಮೃತರು.

ಇನ್ನೋರ್ವ ಪುತ್ರ ಚೈತನ್ಯ(2.5) ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಟಂಟಂ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಸಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.