ಮದ್ಯದ ಮತ್ತಿನಲ್ಲಿ ಸರ್ಕಾರಿ ಜೀಪ್ ಚಲಾಯಿಸಿ ಅಪಘಾತ; ಬೇಕರಿ, ಮೆಡಿಕಲ್ ಸ್ಟೋರ್‌ಗೆ ಭಾರಿ ಹಾನಿ

ಕಾಸರಗೋಡು: ಕುಡಿದ ಮತ್ತಿನಲ್ಲಿ ಸರ್ಕಾರಿ ವಾಹನ ಚಲಾಯಿಸಿದ ನೀರಾವರಿ ಇಲಾಖೆಯ ಚಾಲಕ, ಬೇಕಲ ಇಂಡಿಯಾನಾ ಆಸ್ಪತ್ರೆಯ ಮುಂಭಾಗದಲ್ಲೇ ಭೀಕರ ಅಪಘಾತ ಸೃಷ್ಟಿಸಿದ್ದಾನೆ. ಕುಡಿತದ ಅಮಲಿನಲ್ಲಿ ನಿಯಂತ್ರಣ ತಪ್ಪಿದ ಜೀಪ್, ಮೊದಲು ಕಾರೊಂದಕ್ಕೆ ಢಿಕ್ಕಿ ಹೊಡೆದು, ನಂತರ ರಸ್ತೆ ಬದಿಯ ಬೇಕರಿ ಮತ್ತು ಮೆಡಿಕಲ್ ಸ್ಟೋರ್‌ಗೆ ನುಗ್ಗಿ ಭಾರಿ ರಾದ್ಧಾಂತ ಸೃಷ್ಟಿಸಿದೆ!

ಸೋಮವಾರ ಸಂಜೆ ಕನ್ಹಂಗಾಡ್ ಕಡೆಯಿಂದ ಕಾಸರಗೋಡು ಕಡೆಗೆ ಅತೀ ವೇಗವಾಗಿ ಬಂದ ನೀರಾವರಿ ಇಲಾಖೆಯ ಎಸ್‌ಯುವಿ (ಜೀಪ್) ಪಾಲಕುನ್ನು ತಲುಪುತ್ತಿದ್ದಂತೆ ಮುಂಭಾಗದಲ್ಲಿದ್ದ ಕಾರಿಗೆ ಜೋರಾಗಿ ಗುದ್ದಿದೆ. ಅಷ್ಟಕ್ಕೇ ನಿಲ್ಲದೆ ರಸ್ತೆ ಬದಿಯ ಬೇಕರಿಯ ಕೌಂಟರನ್ನು ಧ್ವಂಸಗೊಳಿಸಿ ಒಳಗಡೆ ನುಗ್ಗಿ ಪಕ್ಕದ ಮೆಡಿಕಲ್ ಸ್ಟೋರ್‌ನ ಪಿಲ್ಲರ್‌ಗೆ ಬಡಿದು ವಾಹನ ನಿಂತಿದೆ. ಇಂಪ್ಯಾಕ್ಟ್ ಎಷ್ಟಿತ್ತೆಂದರೆ ಬೇಕರಿ ಮತ್ತು ಮೆಡಿಕಲ್ ಶಾಪ್‌ನ ಮುಂಭಾಗದ ಗ್ಲಾಸ್‌ಗಳು, ಪೀಠೋಪಕರಣಗಳು ಹಾಗೂ ಕೌಂಟರ್‌ಗಳು ಸಂಪೂರ್ಣ ಪುಡಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಜೀಪಿನಲ್ಲಿದ್ದ ಅಧಿಕಾರಿಗಳು ಹಾಗೂ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತ ನಡೆದ ತಕ್ಷಣ ಜೀಪ್ ಚಾಲಕ ಸಂಪೂರ್ಣ ಕುಡಿದಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಚಾಲಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸ್ಥಳದಿಂದ ವಾಹನವನ್ನು ಸರಿಸಲು ಬಿಡದೆ ರಸ್ತೆ ತಡೆ ನಡೆಸಿದರು. ಸರ್ಕಾರಿ ಸಂಬಳ ಪಡೆದು ಸಾರ್ವಜನಿಕರ ಜೀವದ ಜೊತೆ ಆಟವಾಡುವ ಚಾಲಕನಿಗೆ ತಕ್ಷಣವೇ ವೈದ್ಯಕೀಯ ತಪಾಸಣೆ ನಡೆಸಬೇಕು ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಧಾವಿಸಿದ ಬೇಕಲ ಠಾಣಾ ಐಪಿಎಸ್ ಪ್ರೊಬೇಷನರಿ ಅಧಿಕಾರಿ ಶಿವಂ ನೇತೃತ್ವದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು, ಚಾಲಕನನ್ನು ಕನ್ಹಂಗಾಡ್ ಜನರಲ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

ಚಾಲಕನ ಬಾಯಲ್ಲಿ ಮದ್ಯದ ವಾಸನೆ ಬರುತ್ತಿರುವುದು ಪ್ರಾಥಮಿಕವಾಗಿ ದೃಢಪಟ್ಟಿದೆ ಎಂದು ಐಪಿಎಸ್ ಅಧಿಕಾರಿ ಶಿವಂ ತಿಳಿಸಿದ್ದಾರೆ. ರಕ್ತದಲ್ಲಿನ ಮದ್ಯದ ಪ್ರಮಾಣ 30 ಮಿಗ್ರಾಂಗಿಂತ (per 100ml) ಹೆಚ್ಚಿರುವುದು ವೈದ್ಯಕೀಯ ವರದಿಯಲ್ಲಿ ಸಾಬೀತಾದರೆ, ಚಾಲಕನ ವಿರುದ್ಧ ʻಡ್ರಂಕ್ ಅಂಡ್ ಡ್ರೈವ್’ (ಕುಡಿದು ವಾಹನ ಚಲಾವಣೆ) ಅಡಿಯಲ್ಲಿ ಕಠಿಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಮತ್ತು ಸರ್ಕಾರಿ ವಾಹನ ದುರುಪಯೋಗದಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಖಾಕಿ ಪಡೆ ಎಚ್ಚರಿಸಿದೆ.

error: Content is protected !!