
ಹೊಸದಿಲ್ಲಿ: ದೇಶಾದ್ಯಂತ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್‌ಗೆ 0.87 ಪೈಸೆ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 0.91 ಪೈಸೆ ಹೆಚ್ಚಳವಾಗಿದೆ.

ಜಾಗತಿಕ ಕಚ್ಚಾ ತೈಲ ಬೆಲೆಗಳು ಮತ್ತು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಗಳ ಹಿನ್ನೆಲೆ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಈ ತಿಂಗಳು ಇಂಧನ ದರಗಳಲ್ಲಿ ಮೂರನೇ ಬಾರಿ ಹೆಚ್ಚಳವನ್ನು ಮಾಡಿದ್ದು, ದಿಲ್ಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 87 ಪೈಸೆ ಹೆಚ್ಚಳವಾಗಿರುವುದರಿಂದ 98.64 ರೂಪಾಯಿಯಿಂದ 99.51 ರೂಪಾಯಿಗೆ ತಲುಪಿದೆ. ಅದೇ ರೀತಿ, ಡೀಸೆಲ್ ಬೆಲೆಯು ಲೀಟರ್‌ಗೆ 91 ಪೈಸೆ ಏರಿಕೆಯಾಗಿ 91.58 ರೂಪಾಯಿಯಿಂದ 92.49 ರೂಪಾಯಿಗೆ ಹೆಚ್ಚಳವಾಗಿದೆ.

ಭಾರತವು ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜುಗಳನ್ನು ಹೊಂದಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಭರವಸೆ ನೀಡಿದ ಬೆನ್ನಲ್ಲೆ ಈ ಏರಿಕೆ ನಡೆದಿದ್ದು, ಮೇ.15ರಂದು ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಲೀಟರ್‌ಗೆ 3 ರೂಪಾಯಿ ಹೆಚ್ಚಳವಾಗಿತ್ತು. ಮೇ 19 ರಂದು ಎರಡನೇ ಬಾರಿಗೆ 90 ಪೈಸೆ ಹೆಚ್ಚಿಸಲಾಗಿತ್ತು. ಕಳೆದ 10 ದಿನಗಳಲ್ಲಿ ಇಂಧನ ದರಗಳು ಮೂರನೇ ಬಾರಿ ಹೆಚ್ಚಳವಾಗಿದೆ.
