ಬೆಂಗಳೂರು: ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಮದುವೆಯಾಗುವುದಾಗಿ ನಂಬಿಸಿ, ಯುವತಿಯ ಕುಟುಂಬಸ್ಥರಿಂದ ಹೆಚ್ಚುವರಿ ವರದಕ್ಷಿಣೆಗೆ ಬೇಡಿಕೆಯಿಟ್ಟ ಆರೋಪದಡಿ ಯುವಕನೋರ್ವನ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ಮೂಲದ ಪ್ರದೀಪ್ ಸೋಲೋಮನ್ ಆರೋಪಿ. ಆಡುಗೋಡಿಯ ಪ್ಯಾಟ್ರಿಕ್ ರಾಜು ಎಂಬುವವರು ನೀಡಿರುವ ದೂರಿನ ಆಧಾರದ ಮೇಲೆ, ಪ್ರದೀಪ್ ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ತಾಯಿ ಕಲಾವತಿ ವಿರುದ್ಧವೂ ಕೇಸ್ ದಾಖಲಾಗಿದೆ.

ಜಡ್ಜ್ ಆಗಲು ಪರೀಕ್ಷೆ ಬರೆದಿದ್ದು, ಈ ಬಾರಿ ಜಡ್ಜ್ ಆಗುತ್ತೇನೆ ಎಂದು ಪ್ರದೀಪ್ ಸುಳ್ಳು ಹೇಳಿದ್ದಾನೆ. ನಂತರ ಪ್ಯಾಟ್ರಿಕ್ ರಾಜು, ಕುಟುಂಬಸ್ಥರೊಂದಿಗೆ ಮೈಸೂರಿನಲ್ಲಿರುವ ಆರೋಪಿಯ ಮನೆಗೆ ಹೋಗಿದ್ದರು.

ಪ್ಯಾಟ್ರಿಕ್ ರಾಜು ಮನೆಗೆ ಬಂದಿದ್ದ ಪ್ರದೀಪ್ ಹಾಗೂ ಆತನ ತಾಯಿ, ವರದಕ್ಷಿಣೆಯಾಗಿ 1 ಫಾರ್ಚು ನರ್ ಕಾರು, 1 ಕೆ.ಜಿ. ಚಿನ್ನ, ಬೆಂಗಳೂರಿನಲ್ಲಿ 1 ಮನೆ ಮತ್ತು ಹುಡುಗನಿಗೆ ಚಿನ್ನದ ಕತ್ತಿನ ಚೈನು, ಉಂಗುರ ಹಾಗೂ ವಾಚ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ನಿಶ್ಚಿತಾರ್ಥ ಮುಗಿದ ಬಳಿಕ ವರದಕ್ಷಿಣೆ ಹಣ ಮತ್ತು ಚಿನ್ನದ ಒಡವೆಯೊಂದಿಗೆ ಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಟ್ಟರೆ ಮದುವೆ ಮಾಡಿಕೊಳ್ಳುವುದಾಗಿ, ಇಲ್ಲವಾದಲ್ಲಿ ಮದುವೆ ನಿಲ್ಲಿಸುವುದಾಗಿ ಆರೋಪಿ ಪ್ರದೀಪ್ ತಿಳಿಸಿದ್ದ. ವರದಕ್ಷಿಣೆಯಾಗಿ 20 ಲಕ್ಷ ರೂ. ಪಡೆಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮತ್ತೊಂದೆಡೆ ಈ ಆರೋಪ ಅಲ್ಲಗೆಳೆದು ವಿಡಿಯೋ ಮಾಡಿರುವ ಪ್ರದೀಪ್ ಅವರು, ನನ್ನ 2 ಮನೆಯನ್ನು ಬಾಡಿಗೆ ಕೊಟ್ಟಿರುವುದಕ್ಕೆ ದಾಖಲೆ ಇದೆ ಎಂಬುದಾಗಿ ಹೇಳಿ ದಾಖಲೆ ತೋರಿಸಿದ್ದಾರೆ. ಇನ್ನು ಪ್ಯಾಟ್ರಿಕ್ ರಾಜು ಅವರು, ನಮ್ಮ ಮನೆಯಲ್ಲಿ ಒಬ್ಬಳೇ ಮಗಳಿದ್ದಾಳೆ. ನೀವು ನಮ್ಮ ಮನೆಯ ಅಳಿಯ ಆಗಬೇಕು ಎಂದು ಎಂದು ಬಹಳ ಗೌರವಯುತವಾಗಿ ಕೇಳಿಕೊಂಡಿದ್ದರು ಎಂದು ಹೇಳಿದ್ದರು ಎಂದು ವಿಡಿಯೋದಲ್ಲಿ ಪ್ರದೀಪ್ ತಿಳಿಸಿದ್ದಾರೆ.