ಮಂಗಳೂರು: ರಸ್ತೆ ಕಾಮಗಾರಿ ಮುಗಿಸಿ ಮಣ್ಣು ಹಾಕಿದ ಜಾಗದಲ್ಲಿ ಹೂತುಹೋದ ಕೂಲ್ ಡ್ರಿಂಕ್ಸ್ ಟ್ರಕ್!

ಮಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿಗಳ ಎಡವಟ್ಟು ಹಾಗೂ ಅವೈಜ್ಞಾನಿಕ ರಸ್ತೆ ಕೆಲಸಗಳಿಗೆ ನಿದರ್ಶನ ಎಂಬಂತೆ, ನಗರದ ಕರಂಗ್ಲಪಾಡಿ ಎ.ಜೆ. ಗ್ರೌಂಡ್ ಸಮೀಪ ರಸ್ತೆ ಕಾಮಗಾರಿ ನಡೆದು ಮಣ್ಣು ಹಾಕಿದ್ದ ಜಾಗದಲ್ಲಿ ಕೂಲ್ ಡ್ರಿಂಕ್ಸ್ ಸಾಗಾಟದ ಭಾರಿ ಟ್ರಕ್ ಒಂದರ ಚಕ್ರಗಳು ಹೂತುಹೋಗಿರುವ ಘಟನೆ ನಡೆದಿದೆ.

ಇತ್ತೀಚೆಗಷ್ಟೇ ಈ ಭಾಗದಲ್ಲಿ ರಸ್ತೆ ಕಾಮಗಾರಿ ಮುಗಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡ ನಂತರ ಗುತ್ತಿಗೆದಾರರು ಹಾಗೂ ಕಾರ್ಮಿಕರು ರಸ್ತೆಯ ಪಕ್ಕದಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಿ ಹಾಗೇ ಬಿಟ್ಟಿದ್ದರು. ಆದರೆ, ಮಣ್ಣು ಸರಿಯಾಗಿ ಗಟ್ಟಿಯಾಗದ ಕಾರಣ ಆ ಜಾಗ ಅಪಾಯಕಾರಿಯಾಗಿ ಪರಿಣಮಿಸಿತ್ತು.

 

ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಲೆಂದು ಬಂದ ಕೂಲ್ ಡ್ರಿಂಕ್ಸ್ ಲೋಡ್ ಹೊಂದಿದ್ದ ಭಾರಿ ಟ್ರಕ್ ಹಸಿಯಾದ ಮಣ್ಣಿನ ಮೇಲಿಡುತ್ತಿದ್ದಂತೆ, ಅದರ ಹಿಂಬದಿಯ ಚಕ್ರಗಳು ಮಣ್ಣಿನೊಳಗೆ ತೀವ್ರವಾಗಿ ಹೂತುಹೋಗಿವೆ. ಟ್ರಕ್ ಮುಂದಕ್ಕೆ ಚಲಿಸಲಾಗದೆ ಒಂದೇ ಕಡೆ ಸಿಲುಕಿಕೊಂಡಿದ್ದರಿಂದ ಸ್ಥಳದಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು.

ಕಾಮಗಾರಿ ಮುಗಿದ ಬಳಿಕ ಮಣ್ಣು ಹಾಕಿ ಸರಿಯಾಗಿ ರೋಲರ್ ಮೂಲಕ ಗಟ್ಟಿ ಮಾಡದೆಯೇ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಈ ಎಡವಟ್ಟು ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಕ್ರೇನ್ ತರಿಸಿ, ಭಾರಿ ಕಸರತ್ತಿನ ಬಳಿಕ ಟ್ರಕ್ ಅನ್ನು ಮಣ್ಣಿನಿಂದ ಮೇಲೆತ್ತಲಾಯಿತು. ಅದೃಷ್ಟವಶಾತ್ ಟ್ರಕ್ ಉರುಳಿ ಬೀಳದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ನಗರದಲ್ಲಿ ಇಂತಹ ಕಾಮಗಾರಿಗಳ ಬಳಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

error: Content is protected !!