ಉಡಾಫೆಯ, ಅಸಡ್ಡೆಯ, ಲಜ್ಜೆಗೆಟ್ಟ ಸಿದ್ದರಾಮಯ್ಯ ಸರಕಾರ -ಕ್ಯಾ. ಬ್ರಿಜೇಶ್ ಚೌಟ

ಮಂಗಳೂರು: “ರಾಜ್ಯದಲ್ಲಿ ಸದ್ಯ ಅಧಿಕಾರದಲ್ಲಿರುವುದು ಜನರ ಹಿತ ಕಾಯುವ ಸರ್ಕಾರವಲ್ಲ; ಬದಲಿಗೆ ಕೇಂದ್ರದ ಯೋಜನೆಗಳನ್ನು ಮೂಲೆಗೆ ತಳ್ಳಿ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಉಡಾಫೆಯ, ಅಸಡ್ಡೆಯ ಮತ್ತು ಲಜ್ಜೆಗೆಟ್ಟ ಸರ್ಕಾರ” ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ..

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ಆರ್ಥಿಕ ದಿವಾಳಿತನವನ್ನು ಅವರು ಅಂಕಿ-ಅಂಶಗಳ ಸಮೇತ ಕಟುವಾಗಿ ಟೀಕಿಸಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಡೀ ದೇಶದಲ್ಲೇ ಅತ್ಯಂತ ಗಟ್ಟಿಯಾದ ಆರ್ಥಿಕ ಶಿಸ್ತಿಗೆ ಹೆಸರುವಾಸಿಯಾಗಿದ್ದ ಕರ್ನಾಟಕವನ್ನು, ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕೇವಲ ಮೂರು ವರ್ಷಗಳಲ್ಲಿ ಭಾರಿ ಋಣಭಾರವಾಗಿ ಪರಿವರ್ತಿಸಿದೆ ಎಂದು ಚೌಟ ದೂರಿದರು. ರಾಜ್ಯದ ಇಂದಿನ ಕಂಗಾಲಾದ ಹಣಕಾಸು ಪರಿಸ್ಥಿತಿಯನ್ನು ಖುದ್ದಾಗಿ ಸಿಎಜಿ (CAG) ವರದಿಯೇ ಎತ್ತಿ ತೋರಿಸುತ್ತಿದೆ. ಇಂತಹ ಆರ್ಥಿಕ ದುರ್ನಿರ್ವಹಣೆಯ ನಡುವೆಯೂ ನಾಚಿಕೆಯಿಲ್ಲದೆ ಸಾಧನಾ ಸಮಾವೇಶ ನಡೆಸಲು ಹೊರಟಿರುವ ಸರ್ಕಾರಕ್ಕೆ ಪ್ರಜೆಗಳನ್ನು ಸಾಲದ ಸುಳಿಯಲ್ಲಿ ಸಿಲುಕಿಸಿರುವುದೇ ದೊಡ್ಡ ಸಾಧನೆಯಾಗಿದೆಯೇ ಎಂದು ಅವರು ಪ್ರಶ್ನಿಸಿದರು.

ರಾಜ್ಯದ ಆಡಳಿತ ಎಷ್ಟು ಹದಗೆಟ್ಟಿದೆ ಎಂದರೆ, ಸಾರ್ವಜನಿಕರ ಜೀವ ರಕ್ಷಿಸಬೇಕಾದ ಆರೋಗ್ಯ ಇಲಾಖೆಗೆ ಸಂಬಳ ಮತ್ತು ನಿರ್ವಹಣೆಗೆ ಹಣ ನೀಡಲು ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆರೋಗ್ಯ ಇಲಾಖೆಯು ಸಿಎಸ್ಆರ್ (CSR) ಮುಖಾಂತರ ಬರುವ 25 ಕೋಟಿ ರೂ.ಗಳ ಭಿಕ್ಷೆಯ ಹಣದಲ್ಲಿ ನಡೆಯುವಂತಾಗಿದೆ. ಮತ್ತೊಂದೆಡೆ, ಹಗಲಿರುಳು ಕಷ್ಟಪಡುವ ಹೈನುಗಾರರಿಗೆ ‘ಕ್ಷೀರಧಾರೆ’ ಯೋಜನೆಯಡಿ ಕಳೆದ 9 ತಿಂಗಳಿನಿಂದ ನೀಡಬೇಕಾದ ಬರೋಬ್ಬರಿ 800 ಕೋಟಿ ರೂ. ಸಬ್ಸಿಡಿಯನ್ನು ಬಾಕಿ ಉಳಿಸಿಕೊಂಡು ರೈತರ ಹೊಟ್ಟೆಗೆ ಹೊಡೆಯಲಾಗಿದೆ.

“ಪಿಎಂ ಆವಾಸ್ ಯೋಜನೆಯಡಿ ಬಡವರಿಗಾಗಿ ಮಂಜೂರಾದ 6.38 ಲಕ್ಷ ಮನೆಗಳ ಪೈಕಿ 2.5 ಲಕ್ಷ ಮನೆಗಳನ್ನು ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡದೆ ಅಪೂರ್ಣವಾಗಿ ನಿಲ್ಲಿಸಿದೆ. ಇದರ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮೀಸಲಿಡಲಾಗಿದ್ದ 15,000 ಕೋಟಿ ರೂಪಾಯಿಗಳ ಬೃಹತ್ ಕಾರ್ಪಸ್ ನಿಧಿಯನ್ನು ಬೇರೆ ಉದ್ದೇಶಗಳಿಗೆ ಅಕ್ರಮವಾಗಿ ತಿರುಗಿಸಲಾಗಿದೆ. ಆದರೆ ಈ ಹಣ ಎಲ್ಲಿಗೆ ಹೋಯಿತು ಎಂಬ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾರ ಬಳಿಯೂ ಉತ್ತರವಿಲ್ಲ. ಇಡೀ ಕರ್ನಾಟಕವನ್ನು ದೆಹಲಿ ಕಾಂಗ್ರೆಸ್ ಹೈಕಮಾಂಡ್‌ಗೆ ‘ಎಟಿಎಂ’ ನಂತೆ ಬಳಸಿಕೊಳ್ಳಲಾಗುತ್ತಿದೆ” ಎಂದು ಸಂಸದರು ಗಂಭೀರ ಆರೋಪ ಮಾಡಿದರು.

ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಟ್ವಿಟರ್ ರಾಜಕಾರಣದ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ ಚೌಟ, “ನಾನು ಅವರಂತೆ ಕೇವಲ ಸೋಷಿಯಲ್ ಮೀಡಿಯಾದಲ್ಲಿ ಕುಳಿತು ಟ್ವೀಟ್ ಮಾಡಿಕೊಂಡು ರಾಜಕೀಯ ನಡೆಸುವುದಿಲ್ಲ. ಪ್ರಿಯಾಂಕ್ ಖರ್ಗೆ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಅಸಲಿ ಯೋಗ್ಯತೆ ಮತ್ತು ಸಾಧನೆ ಏನೆಂಬುದು ಅವರ ಸ್ವಕ್ಷೇತ್ರಗಳ ಹಿಂದುಳಿದ ಪರಿಸ್ಥಿತಿಯೇ ಸಾಕ್ಷಿ ನುಡಿಯುತ್ತದೆ” ಎಂದರು.

ಇನ್ನು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯ ಕುರಿತು ಪ್ರತಿಕ್ರಿಯಿಸಿ, ಇದು ಕೇಂದ್ರ ಸರ್ಕಾರ ಏಕಾಏಕಿ ಮಾಡಿದ್ದಲ್ಲ; ಜಾಗತಿಕ ಮಾರುಕಟ್ಟೆಯ ಬಿಕ್ಕಟ್ಟಿನಿಂದಾಗಿ ಎದುರಾಗಿರುವ ಸವಾಲಾಗಿದ್ದು, ಇದನ್ನು ದೇಶದ ಪ್ರಜ್ಞಾವಂತ ಜನರು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಕೇಂದ್ರ ಇದನ್ನು ಶೀಘ್ರದಲ್ಲೇ ಸರಿದೂಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಇಂತಹ ಜನವಿರೋಧಿ ಧೋರಣೆ ಹಾಗೂ ಅಂಬೇಡ್ಕರ್ ತತ್ವಗಳಿಗೆ ತಿಲಾಂಜಲಿ ನೀಡುತ್ತಿರುವ ನಡೆಗಳ ವಿರುದ್ಧ ಬಿಜೆಪಿ ತಳಮಟ್ಟದಲ್ಲಿ ಉಗ್ರ ಹೋರಾಟ ರೂಪಿಸಲಿದೆ ಎಂದು ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಾಂತಿ ಪ್ರಸಾದ್, ಸುಜಿತ್ ಪ್ರತಾಪ್, ಡಾ. ಮಂಜುಳಾ ರಾವ್, ಸಂಜಯ್ ಪ್ರಭು, ಅರುಣ್ ಶೇಟ್, ರಾಜ್ಗೋಪಾಲ್ ರೈ, ಜೀವನ್, ದೊಂಬಯ್ಯ, ಹೇಮತ್ ಶಟ್, ಕದ್ರಿ ಮನೋಹರ್ ಶೆಟ್ಟಿ, ಮಾಧವ ಮಾವೆ ಉಪಸ್ಥಿತರಿದ್ದರು.

error: Content is protected !!