
ಪುಣೆ: ಲಿಫ್ಟ್ ಒಳಗೆ ಸಿಲುಕಿ ಏಳು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಪುಣೆಯ ಸಿಂಹಗಡ್ ರಸ್ತೆ ಪ್ರದೇಶದ ವಸತಿ ಕಟ್ಟಡವೊಂದರಲ್ಲಿ ನಡೆದಿದೆ.

ಶಿವಾಂಶ್ ಶೈಲೇಶ್ ಧೂತ್ ಮೃತ ಮಗು.
ಶಿವಾಂಶ್ ಎಂದಿನಂತೆ ರಾತ್ರಿ 10 ಗಂಟೆ ಸುಮಾರಿಗೆ ಹೌಸಿಂಗ್ ಸೊಸೈಟಿ ಆವರಣದೊಳಗೆ ಆಟವಾಡುತ್ತಿದ್ದ. ಈ ಸಮಯದಲ್ಲಿ, ಆತ ಕಟ್ಟಡದ ಲಿಫ್ಟ್‌ಗೆ ಪ್ರವೇಶಿಸಿ ಒಂದು ಗುಂಡಿಯನ್ನು ಒತ್ತಿದ್ದಾನೆ. ಬಳಿಕ ಲಿಫ್ಟ್ ಚಲಿಸಲು ಪ್ರಾರಂಭಿಸಿತು. ಆದರೆ, ಎರಡನೇ ಮಹಡಿ ತಲುಪುವ ಮುನ್ನವೇ ಮಧ್ಯದಲ್ಲಿಯೇ ನಿಂತಿತು. ಇದರಿಂದಾಗಿ ಮಗು ಒಳಗೆ ಸಿಲುಕಿಕೊಂಡಿತು. ಶಿವಾಂಶ್ ಬಹಳ ಸಮಯವಾದರೂ ಮನೆಗೆ ಹಿಂತಿರುಗದಿದ್ದಾಗ, ಅವರ ಕುಟುಂಬ ಸದಸ್ಯರು ಮತ್ತು ಇತರ ನಿವಾಸಿಗಳು ಅವನನ್ನು ಹುಡುಕಲು ಪ್ರಾರಂಭಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹುಡುಕಾಟ ನಡೆಸುತ್ತಿರುವ ವೇಳೆ ಲಿಫ್ಟ್ ಸಿಕ್ಕಿಹಾಕಿಕೊಂಡಿರಬಹುದು ಎಂದು ನಿವಾಸಿಗಳು ಶಂಕಿಸಿದ್ದಾರೆ. ರಾತ್ರಿ 11.30ರ ಸುಮಾರಿಗೆ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ತಂಡ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬಹಳ ಪ್ರಯತ್ನದ ಬಳಿಕ ಲಿಫ್ಟ್ ತೆರೆದಿದ್ದಾರೆ. ಆದರೆ, ಮಗು ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದು ಕಂಡುಬಂದಿದೆ. ದೀರ್ಘಕಾಲದವರೆಗೆ ಬಾಲಕ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಲಿಫ್ಟ್‌ನಲ್ಲಿ ತಕ್ಷಣಕ್ಕೆ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ ಎಂದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.