
ಬಂಟ್ವಾಳ: ಕಾಲೇಜಿಗೆ ತೆರಳಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಬಸ್ ನಿಲ್ದಾಣ ಪಕ್ಕದಲ್ಲೇ ಅಂಗಡಿ ವ್ಯಾಪಾರ ನಡೆಸುತ್ತಿದ್ದ ಯುವಕನೊಬ್ಬ ಮಚ್ಚಿನಹಾಲ್ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಬಳಿಕ ತಾನಾಗಿಯೇ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಇಂದು ಬೆಳಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಗ್ಗೆ ಸುಮಾರು 8:45 ರ ವೇಳೆಗೆ ಬಂಟ್ವಾಳದ ಮೊಂತಿಮಾರು ಬಸ್ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದೆ. ಎಂದಿನಂತೆ ಕಾಲೇಜಿಗೆ ಹೋಗಲು ಬಾಲಕಿಯು ಬಸ್ಸಿಗಾಗಿ ಕಾಯುತ್ತಿದ್ದಾಗ, ಅಲ್ಲಿಗೆ ಚೂರಿಯೊಂದಿಗೆ ಬಂದ ಬಂಟ್ವಾಳ ಮಂಚಿ ನಿವಾಸಿ ಮೊಹಮ್ಮದ್ ಜವ್ವಾರ್ (28) ಎಂಬಾತ ಏಕಾಏಕಿ ಮಚ್ಚಿನಿಂದ ತಲೆ ಹಾಗೂ ಕೈಗೆ ಕಡಿದು ಕೊಲೆಗೆ ಯತ್ನಿಸಿದ್ದಾನೆ.
ಬಹಿರಂಗವಾಗಿಯೇ ಈ ಕ್ರೂರ ಕೃತ್ಯ ಎಸಗಿದ ಬಳಿಕ, ಆರೋಪಿ ಮೊಹಮ್ಮದ್ ಜವ್ವಾರ್ ನೇರವಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಇತ್ತ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯನ್ನು ತಕ್ಷಣವೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು, ಹಲ್ಲೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಮುಂದಿನ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
