ಅಂಬರ್ ನಾಥ್ ನಲ್ಲಿ ಶನೀಶ್ವರ ಮುಂಬೈ ಯಕ್ಷಯಾನ ಉದ್ಘಾಟನೆ

ಮಂಗಳೂರು: ದೇಶ ವಿದೇಶ ಗಳಲ್ಲಿ ಶ್ರೀ ಶನೀಶ್ವರ ಮಹಾತ್ಮೆ ಪೂಜಾ ಸಹಿತ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಗಳನ್ನು ನೀಡುತ್ತಿರುವ ಕರಾವಳಿಯ ಪ್ರಸಿದ್ದ ಪಕ್ಷಿಕೆರೆ ತಂಡದ ಮುಂಬೈಯಕ್ಷ ಯಾನ -2026 ಜೂಲೈ 10 ಶುಕ್ರವಾರ ಅಪರಾಹ್ನ 3.30 ಕ್ಕೆ ಅಂಬರ್ನಾತ್ (ಪ ) ನ ಹೋಟೆಲ್ S – 3 ಪಾರ್ಕ್ ನಲ್ಲಿ ಉದ್ಘಾಟನೆಗೊಳ್ಳಲಿದೆ.
ಬಂಟ್ಸ್ ಸಂಘ ಮುಂಬೈಯ ಭೀವಂಡಿ ಟು ಬದ್ಲಾಪುರ ಪ್ರಾದೇಶಿಕ ಸಮಿತಿಯು ಅಂದಿನ ಕಾರ್ಯಕ್ರಮವನ್ನು ಸಂಯೋಜಸಿದೆ.
ಕಾರ್ಯಧ್ಯಕ್ಷ ಸುಬೋಧ್ ಡಿ ಭಂಡಾರಿ ಅವರು ಯಕ್ಷ ಯಾನದ ಉದ್ಘಾಟನೆ ಮಾಡಲಿದ್ದಾರೆ.
ಮುಂಬೈ ಬಂಟ್ಸ್ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಪೂರ್ವ ವಲಯ ಸಮನ್ವಯಗಾರ ಸುಕುಮಾರ್ ಎನ್ ಶೆಟ್ಟಿ, ಶನಿ ಪೂಜಾ ಪ್ರಯೋಜಕರಾದ ಸುಬ್ಬಯ್ಯ ಎ ಶೆಟ್ಟಿ, ಸತೀಶ್ ಎನ್ ಶೆಟ್ಟಿ ಉಪಸ್ಥಿತರಿರುವರು. ಮಹಿಳಾ ವಿಭಾಗದವರಿಂದ ದೀಪಕ ಮಾಲಾ ದೀಪ ಪ್ರಜ್ವಲನ ಸೇವೆ ನಡೆಯಲಿದೆ ಎಂದು ಕಾರ್ಯದರ್ಶಿ ಹರೀಶ್ ಟಿ ಶೆಟ್ಟಿ ತಿಳಿಸಿದ್ದಾರೆ
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು ಅವರ ಸಾರಥ್ಯ ದಲ್ಲಿ ಪ್ರಬುದ್ಧ ಕಲಾವಿದರ ತಂಡ ಮುಂಬೈಯಲ್ಲಿ ಹತ್ತು ದಿನ, ಹತ್ತು ಸ್ಥಳಗಳಲ್ಲಿ, ಹತ್ತು ಶನಿ ಕಥೆ ಯಕ್ಷಗಾನ ನಡೆಸಲಿದೆ.
ಕಳೆದ ಮೂರು ದಶಕಗಳಿಂದ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಅವರ ನೇತೃತ್ವದ ಶನಿ ಪೂಜೆಯ ಮಂಡಳಿ ಕಾರ್ಯಕ್ರಮ ಸಂಯೋಜನೆ ಮಾಡುತ್ತಿದ್ದು ದುಬೈ, ಅಬುದಾಬಿ, ಮಸ್ಕಟ್ ದೇಶಗಳಲ್ಲಿಯೂ ಪ್ರದರ್ಶನ ನೀಡಿದ ಹೆಗ್ಗಳಿಕೆ ಹೊಂದಿದೆ. ಕರ್ನೂರು ಮೋಹನ್ ರೈ, ಅಜೆಕಾರು ಬಾಲಕೃಷ್ಣ ಶೆಟ್ಟಿ, ಕಾಪು ಕಲ್ಯಾ ದಿನೇಶ್ ಶೆಟ್ಟಿ ಅವರ ಸಾರಥ್ಯದಲ್ಲಿಯೂ ಈ ತಂಡದ ಮುಂಬೈ ಯಕ್ಷಯಾನ ಯಶಸ್ವಿ ಯಾಗಿ ಜರಗಿದ್ದು ಇದೀಗ ಆರನೆಯ ಆವೃತ್ತಿಯ ಯಕ್ಷಗಾನಕ್ಕೆ ತಂಡ ಸಜ್ಜಾಗಿದೆ.
ರಾಜಾ ವಿಕ್ರಮಾದಿತ್ಯನನ್ನು ಏಳು ವರೆ ವರ್ಷ ಕಾಟ ನೀಡಿ ಪಾಠ ಕಲಿಸಿ, ಶಿಕ್ಷೆಯೊಂದಿಗೆ ಶಿಕ್ಷಣ ನೀಡಿದ ಶನಿ ದೇವರ ಪುಣ್ಯ ಕಥೆ ಯನ್ನು ಚಿನ್ಮಯ ದಾಸರು ಮೂಡಲಪಾಯ ಯಕ್ಷಗಾನ ಗ್ರಂಥ ರೂಪದಲ್ಲಿ ರಚಿಸಿದ್ದು, ಆ ಪ್ರಸಂಗ ಪಠ್ಯವು ಶನಿ ಪಾರಾಯಣ ಪೂಜಾ ಗ್ರಂಥವಾಗಿ ಮಾನ್ಯತೆ ಪಡೆದಿದೆ. ಆರು ಘಂಟೆಯ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮೂರುವರೆ ಘಂಟೆಗಳಲ್ಲಿ ತಾಳಮದ್ದಳೆ ಸ್ವರೂಪದಲ್ಲಿ ನಿರ್ವಹಿಸುತ್ತಿರುವುದು, ತಂಡದ ಶಿಸ್ತು, ಕಲಾವಿದರ ಶ್ರದ್ದೆ ಪ್ರದರ್ಶನದ ಯಶಸ್ಸಿಗೆ ಕಾರಣವಾಗಿದೆ.
ಈ ವರ್ಷದ ಮುಂಬೈ ಯಕ್ಷಯಾನದಲ್ಲಿ ಖ್ಯಾತ ನಿರೂಪಕ, ನಾಟಕಗಾರ ನವನೀತ ಶೆಟ್ಟಿ ಕದ್ರಿ, ತೆಂಕು ತಿಟ್ಟಿನ ಪ್ರಸಿದ್ದ ವೇಷಧಾರಿ, ಅರ್ಥಧಾರಿ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ತೆಂಕು ಬಡಗು ತಿಟ್ಟಿನಲ್ಲಿ ತುಳು – ಕನ್ನಡ ಪ್ರಸಂಗಗಳ ಖ್ಯಾತ ಅರ್ಥಧಾರಿ, ಧರ್ಮ ಶಿಕ್ಷಕ ತಲಪಾಡಿ ಸದಾಶಿವ ಆಳ್ವ ಅವರ ವಿಕ್ರಮಾದಿತ್ಯ ಹಾಗೂ ಶನೀಶ್ವರ ಪಾತ್ರಗಳು ವಿಭಿನ್ನ ನಿರೂಪಣೆಯಿಂದ ಜನ ಮನ ಗೆಲ್ಲಲಿದೆ. ಪ್ರೇಕ್ಷಕರನ್ನು ಗ್ರಾಮ್ಯ ಉದಾಹರಣೆಗಳೊಂದಿಗೆ ನಗೆ ಅಲೆ ಎಬ್ಬಿಸುವ ವಿಜಯ ಕುಮಾರ್ ಶೆಟ್ಟಿ ಮೊಯಿಲೊಟ್ಟು ಅವರ ನಂದಿ ಶ್ರೇಷ್ಟಿ ಹಾಗೂ ಗಾಣಿಗನ ಪಾತ್ರದಲ್ಲಿ ಹಾಸ್ಯದ ಹೊನಲು ಹರಿಯಲಿದೆ. ಕಂಚಿನ ಕಂಠದ ಅತ್ತೂರು ಗುತ್ತು ಪ್ರಸನ್ನ ಶೆಟ್ಟಿ ಅವರ ಆಲೋಲಿಕೆಯ ಮಾತಿನ ಮೊನಚು, ರವಿ ಭಟ್ ಪಡುಬಿದ್ರಿ ಅವರ ರಾಜ ಹಾಸ್ಯದ ಕಾರವಾನ ಶನಿ, ಯುವ ಪ್ರತಿಭೆ ಕುಮಾರಿ ವಾರುಣಿ ನಾಗರಾಜ್ ಆಚಾರ್ಯ ಅವರ ಭಾವನಾತ್ಮಕ ಪ್ರಸ್ತುತಿ ಯ ಸುಶೀಲೆ ಪಾತ್ರವಿದೆ .
ಈ ವರ್ಷದ ಯಕ್ಷ ಯಾನದಲ್ಲಿ ಹನುಮಗಿರಿ ಮೇಳದ ಪ್ರಧಾನ ಭಾಗವತ, ತೆಂಕು ತಿಟ್ಟಿನ ಅಗ್ರ ಪಂಕ್ತಿಯ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರು ದೀಪಕ ಮಾಲಾರಾಗದ ಹಾಡನ್ನು ಹತ್ತು ಕಡೆ ವಿಭಿನ್ನ ರೀತಿಯಲ್ಲಿ ಹಾಡಲಿದ್ದಾರೆ.
ಬಿರುವ ಜವಣೆರ್ ಮಸ್ಕತ್ ಮೂರೂ ಬಾರಿ ಈ ಒಂದೇ ತಂಡ ವನ್ನು ಮಸ್ಕತ್ ಗೆ ತರಿಸಿ ಶನೀಶ್ವರ ಮಹಾತ್ಮೆ ಅಲ್ಲದೆ ಸತ್ಯನಾರಾಯಣ ಮಹಾತ್ಮೆ, ಕೊರಗಜ್ಜ ಪ್ರಸಂಗಗಳನ್ನು ಪ್ರದರ್ಶಿಸಿರುವುದು ಪಕ್ಷಿಕೆರೆ ತಂಡದ ಜನಪ್ರಿಯತೆಗೆ ಸಾಕ್ಷಿ.

ಈ ಮಂಡಳಿ ವಾರ್ಷಿಕ ಸುಮಾರು 50 ಕಾರ್ಯಕ್ರಮಗಳನ್ನು ನೀಡುತ್ತಿದ್ದು ಇದೀಗ ಮುಂಬೈಯಲ್ಲಿ ಜುಲೈ10 ರಿಂದ 19 ರವರೆಗೆ ಅಂಬರ್ನಾತ್, ಥಾನಾ, ಮಿರ ರೋಡ್, ಪೂನಾ, ವಿರಾರ್, ಡೊಂಬಿವಲಿ, ಘಂನ್ಸೋಲಿ, ಮುಲುಂಡ್, ನಾಲಾ ಸೊಪರ್ ಹಾಗೂ ಘಾಟ್ ಕೋಪರ್ ನಲ್ಲಿ ಪ್ರದರ್ಶನ ನಡೆಯಲಿದೆ.

error: Content is protected !!