
ಉಡುಪಿ: 108 ಆಂಬುಲೆನ್ಸ್ ಗಳು ಇನ್ಮುಂದೆ ತುರ್ತು ಕರೆಗೆ 15 ನಿಮಿಷಗಳಲ್ಲಿ ನಿಗದಿತ ಸ್ಥಳಕ್ಕೆ ತಲುಪಬೇಕು. ವಿಳಂಬ ಮಾಡಿದರೆ, ಸಂಬಂಧಪಟ್ಟ ಆಂಬುಲೆನ್ಸ್ ಚಾಲಕರಿಗೆ 5,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಈ ಕುರಿತು ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದ ರಾಷ್ಟ್ರೀಯ ಆಂಬುಲೆನ್ಸ್ ಸೇವೆಗಳ ಮಾರ್ಗಸೂಚಿಯ ಪ್ರಕಾರ ತುರ್ತು ಕರೆ ಬಂದ 20 ನಿಮಿಷಗಳ ಒಳಗೆ ವಾಹನ ಸ್ಥಳಕ್ಕೆ ತಲುಪಬೇಕಿರುತ್ತದೆ. ಜೀವ ಉಳಿಸಲು ಗೋಲ್ಡನ್ ಅವರ್ ಪರಿಕಲ್ಪನೆಯನ್ನು ಆಧರಿಸಿ ಈ ನಿಯಮ ರೂಪಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತಷ್ಟು ಕಠಿಣ ನಿಯಮ ರೂಪಿಸಲಾಗುತ್ತಿದ್ದು, ಕಾಲಮಿತಿಯನ್ನು 15 ನಿಮಿಷಗಳಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
