
ಶಿರ್ವ: ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು ಎಂದು ರಾಜ್ಯ ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಶಿರ್ವ ಆಗ್ರಹಿಸಿದರು.
ಆಶಾ ಕಾರ್ಯಕರ್ತೆಯರ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಹಗಲು ರಾತ್ರಿ ಎನ್ನದೆ, ಮಳೆ-ಬಿಸಿಲು ಎನ್ನದೆ ಜನರ ಆರೋಗ್ಯಕ್ಕಾಗಿ ದುಡಿಯುವ ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ತಕ್ಕ ಗೌರವಧನ, ಸೌಲಭ್ಯಗಳು ಸಿಗುತ್ತಿಲ್ಲ. ಇದು ಸರ್ಕಾರಕ್ಕೆ ಮಾಡುವ ಅಪಮಾನ. ಅವರ ಬೇಡಿಕೆಗಳು ತುಂಬಾ ಸರಳವಾದದ್ದು, ಅದನ್ನು ಈಡೇರಿಸಲು ಸರ್ಕಾರ ಯಾಕೆ ಮೀನಮೇಷ ಎಣಿಸುತ್ತಿದೆ?” ಎಂದು ಪವನ್ ಕುಮಾರ್ ಪ್ರಶ್ನಿಸಿದರು.
“ಇಷ್ಟು ದೊಡ್ಡ ಮಟ್ಟದಲ್ಲಿ ರಾಜ್ಯಾದ್ಯಂತ ಧರಣಿ ನಡೆದರೂ ಸಂಬಂಧಪಟ್ಟ ಸಚಿವರುಗಳು ಎಲ್ಲಿ ಹೋಗಿದ್ದಾರೆ? ಅವರ ಕಿವಿಗೆ ಈ ಧ್ವನಿ ಕೇಳುತ್ತಿಲ್ಲವೇ? ಆಶಾ ಕಾರ್ಯಕರ್ತೆಯರು ಕೇವಲ ತಮಗಾಗಿ ಹೋರಾಡುತ್ತಿಲ್ಲ, ಇಡೀ ಆರೋಗ್ಯ ವ್ಯವಸ್ಥೆಯ ಸುಧಾರಣೆಗಾಗಿ ಹೋರಾಡುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಕೂಡ ಅವರ ಜೊತೆಗೆ ಕೈ ಜೋಡಿಸಬೇಕಾಗಿದೆ” ಎಂದು ಅವರು ಕರೆ ನೀಡಿದರು.
“ಸರ್ಕಾರ ಆದಷ್ಟು ಬೇಗ ಬೇಡಿಕೆ ಈಡೇರಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಡಬೇಕಾಗುತ್ತದೆ. ಇದಕ್ಕೆ ಸರ್ಕಾರವೇ ಹೊಣೆಗಾರರಾಗುತ್ತಾರೆ” ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ನೂರಾರು ಆಶಾ ಕಾರ್ಯಕರ್ತೆಯರು, ಸಾಮಾಜಿಕ ಹೋರಾಟಗಾರರು ಭಾಗವಹಿಸಿದ್ದರು.