ನಿಮ್ಮ ಮತ ನಿಮ್ಮ ಹಕ್ಕು: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭ; ಸಾರ್ವಜನಿಕರು ಮಾಡಬೇಕಿರುವುದೇನು?

ಬೆಂಗಳೂರು: ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವಾದ ಚುನಾವಣೆಯಲ್ಲಿ ಪ್ರತಿಯೊಬ್ಬ ನಾಗರಿಕನೂ ಮತ ಚಲಾಯಿಸುವುದು ಅತ್ಯಗತ್ಯ. ಆದರೆ, ಅದಕ್ಕೂ ಮುನ್ನ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಷ್ಟೇ ಮುಖ್ಯ. ಇದಕ್ಕಾಗಿಯೇ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ (SIR – Special Intensive Revision) ಪ್ರಕ್ರಿಯೆಯನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ತಮ್ಮ ಹೆಸರನ್ನು ನೋಂದಾಯಿಸಲು ಮತ್ತು ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಮತದಾರರ ಪಟ್ಟಿಯ ನವೀಕರಣವು ಒಟ್ಟು ಐದು ಪ್ರಮುಖ ಹಂತಗಳಲ್ಲಿ ವ್ಯವಸ್ಥಿತವಾಗಿ ನಡೆಯುತ್ತದೆ:
ಮನೆ-ಮನೆಗೆ ಎಣಿಕೆ: ಬೂತ್ ಮಟ್ಟದ ಅಧಿಕಾರಿಗಳು (BLO) ನಿಮ್ಮ ಮನೆಗೆ ನೇರವಾಗಿ ಬಂದು ಫಾರ್ಮ್ ನೀಡುತ್ತಾರೆ. ಸಾರ್ವಜನಿಕರು ತಮ್ಮ ಹೆಸರು, ವಿಳಾಸ, ವಯಸ್ಸು ಮತ್ತು ಆಧಾರ್ ಇತ್ಯಾದಿ ವಿವರಗಳನ್ನು ಭರ್ತಿ ಮಾಡಿ, ಸಹಿ ಮಾಡಿ ಅವರಿಗೆ ಮರಳಿಸಬೇಕು.


ಕರಡು ಮತಪಟ್ಟಿ ಪ್ರಕಟಣೆ: ಅಧಿಕಾರಿಗಳು ನಡೆಸುವ ಎಲ್ಲಾ ಪರಿಶೀಲನೆಗಳ ನಂತರ ಹೊಸ ಕರಡು ಮತಪಟ್ಟಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗುತ್ತದೆ.
ಹಕ್ಕು ಮತ್ತು ಆಕ್ಷೇಪಣೆಗಳ ಅವಧಿ: ಕರಡು ಪಟ್ಟಿ ಪ್ರಕಟವಾದ ಈ ಅವಧಿಯಲ್ಲಿ ನಿಮ್ಮ ಹೆಸರು ಪಟ್ಟಿಯಿಂದ ಬಿಟ್ಟುಹೋಗಿದ್ದರೆ ಅದನ್ನು ಸೇರಿಸಲು ಅರ್ಜಿ ಸಲ್ಲಿಸಬಹುದು. ಒಂದು ವೇಳೆ ತಪ್ಪು ವಿವರಗಳಿದ್ದರೆ ಅದರ ವಿರುದ್ಧ ಆಕ್ಷೇಪಣೆಯನ್ನೂ ಸಲ್ಲಿಸಲು ಅವಕಾಶವಿದೆ.
ಪರಿಶೀಲನೆ ಮತ್ತು ನಿರ್ಧಾರ: ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ಅಧಿಕಾರಿಗಳು ಸೂಕ್ತವಾಗಿ ಪರಿಶೀಲಿಸಿ, ಅಂತಿಮ ನಿರ್ಧಾರವನ್ನು ಕೈಗೊಳ್ಳುತ್ತಾರೆ.

ಅಂತಿಮ ಮತಪಟ್ಟಿ ಪ್ರಕಟಣೆ: ಎಲ್ಲಾ ಪ್ರಕ್ರಿಯೆಗಳು ಯಶಸ್ವಿಯಾಗಿ ಮುಗಿದ ನಂತರ ಯಾವುದೇ ದೋಷಗಳಿಲ್ಲದ ಅಂತಿಮ ಶುದ್ಧ ಮತಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ.

ಸಾರ್ವಜನಿಕರ ಗಮನಕ್ಕೆ: ನೀವು ಈಗ ಏನು ಮಾಡಬೇಕು?
ನಿಮ್ಮ ಮತದಾನದ ಹಕ್ಕನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಈ ಕೆಳಗಿನ ನಾಲ್ಕು ಸರಳ ಕ್ರಮಗಳನ್ನು ಅನುಸರಿಸಿ:
ತಕ್ಷಣ ಹೆಸರು ಪರಿಶೀಲಿಸಿ: ಇಂದೇ voters.eci.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಅಥವಾ Voter Helpline App ಡೌನ್‌ಲೋಡ್ ಮಾಡಿ ಮಾಹಿತಿ ಪಡೆಯಬಹುದು. ನಿಮ್ಮ ಮೊಬೈಲ್‌ನಿಂದ 1950 ಸಂಖ್ಯೆಗೆ EPIC <ನಿಮ್ಮ EPIC ನಂಬರ್> ಎಂದು ಎಸ್‌ಎಮ್‌ಎಸ್ (SMS) ಕಳುಹಿಸಿಯೂ ಪರಿಶೀಲಿಸಬಹುದು.

ಮನೆಗೆ ಬಿಎಲ್‌ಒ ಬಂದಾಗ: ನಿಮ್ಮ ಮನೆಗೆ ಬರುವ ಬಿಎಲ್‌ಒ ನೀಡುವ ಎಣಿಕೆ ಫಾರ್ಮ್ ಅನ್ನು ಸರಿಯಾಗಿ ತುಂಬಿ, ಸಹಿ ಮಾಡಿ ಹಿಂದಿರುಗಿಸಿ. ಇದಕ್ಕಾಗಿ ನಿಮ್ಮ ಆಧಾರ್, ರೇಷನ್ ಕಾರ್ಡ್ ಹಾಗೂ ವಯಸ್ಸು ಸಾಬೀತುಪಡಿಸುವ ದಾಖಲೆಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿಟ್ಟುಕೊಳ್ಳಿ.

ಆನ್‌ಲೈನ್ ಫಾರ್ಮ್ ಸೌಲಭ್ಯ: ತಂತ್ರಜ್ಞಾನದ ಸದುಪಯೋಗ ಪಡಿಸಿಕೊಳ್ಳಲು ಇಚ್ಛಿಸುವವರು voters.eci.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿಯೇ ಎಣಿಕೆ ಫಾರ್ಮ್ ಅನ್ನು ಸುಲಭವಾಗಿ ತುಂಬಬಹುದು.

ಕರಡು ಪಟ್ಟಿ ಬಂದಾಗ ಅಲರ್ಟ್ ಆಗಿರಿ: ಕರಡು ಪಟ್ಟಿ ಬಿಡುಗಡೆಯಾದಾಗ ನಿಮ್ಮ ಹೆಸರು ಬಿಟ್ಟುಹೋಗಿದ್ದರೆ ಫಾರ್ಮ್-6 ರ ಮೂಲಕ ಹಕ್ಕು ಸಲ್ಲಿಸಿ. ತಪ್ಪುಗಳಿದ್ದರೆ ಅಥವಾ ಅನರ್ಹ ಹೆಸರುಗಳಿದ್ದರೆ ಆಕ್ಷೇಪಣೆ ಸಲ್ಲಿಸಿ. ಯಾವುದೇ ಗೊಂದಲಗಳಿದ್ದರೆ ಸ್ಥಳೀಯ ಚುನಾವಣಾ ಕಚೇರಿ ಅಥವಾ ಉಚಿತ ಹೆಲ್ಪ್‌ಲೈನ್ ಸಂಖ್ಯೆ 1950 ಅನ್ನು ಸಂಪರ್ಕಿಸಬಹುದಾಗಿದೆ.

error: Content is protected !!