
ಮಂಗಳೂರು: “ಪರಿಸರ ಸಂರಕ್ಷಣೆ, ಲಿಂಗ ಸಮಾನತೆ ಮತ್ತು ವಿಶ್ವ ಶಾಂತಿಗಾಗಿ ಸಹಕಾರ ಸಂಸ್ಥೆಗಳು” ಸಹಕಾರ ತತ್ವ ಮತ್ತು ಆಚರಣೆಯಲ್ಲಿ ಅಪಾರ ವಿಶ್ವಾಸವನ್ನು ಇರಿಸಿಕೊಂಡಿದ್ದ ಭಾರತದ ಪ್ರಥಮ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂರವರು ಸಹಕಾರ ತತ್ವದ ಮೂಲಕ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸಬಹುದೆಂಬ ಆಶಯವನ್ನು ಇರಿಸಿಕೊಂಡು ಹಲವಾರು ಯೋಜನೆಗಳನ್ನು ರೂಪಿಸಿದರು. ಇದು ಸಹಕಾರ ಚಳುವಳಿಯ ಬೆಳವಣಿಗೆಗೆ ಸಹಕಾರಿಯಾಯಿತು. ಇದರ ಫಲವಾಗಿ ರಾಷ್ಟ್ರದ ಸಹಕಾರ ಚಳುವಳಿಗೆ 122 ವರ್ಷಗಳ ಭವ್ಯ ಇತಿಹಾಸವಿದೆ. ವಿಶ್ವದಲ್ಲಿ ಅತ್ಯುತ್ತಮ ಸಹಕಾರ ಚಳುವಳಿಯನ್ನು ನಮ್ಮ ರಾಷ್ಟ್ರ ಹೊಂದಿರುತ್ತದೆ. ಸಮಾಜದ ಎಲ್ಲಾ ವರ್ಗದ ಆರ್ಥಿಕ ಬೆಳವಣಿಗೆಗೆ ಸಹಕಾರಿ ಕ್ಷೇತ್ರವೇ ಭದ್ರ ಬುನಾದಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ನವೆಂಬರ್ 14ರಿಂದ 20 ರವರೆಗೆ “ಸಹಕಾರ ಸಪ್ತಾಹ” ನಡೆಯುತ್ತದೆ. ಪಂಡಿತ್ ನೆಹರೂರವರ ಜನ್ಮದಿನವಾದ ನವೆಂಬರ್ 14ರಂದು ಸಪ್ತಾಹದ ಉದ್ಘಾಟನೆ ನಡೆಸಲಾಗುತ್ತದೆ ಎಂದು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಸಪ್ತಾಹದ ಅವಧಿಯಲ್ಲಿ ಸಹಕಾರ ಚಳುವಳಿ ನಡೆದು ಬಂದ ಹಾದಿಯ ಅವಲೋಕನ ನಡೆಸಿ ಭವಿಷ್ಯದ ಸಹಕಾರಿ ಚಳುವಳಿಯನ್ನು ಯಶಸ್ವಿಯಾಗಿ ಮುನ್ನಡೆಸುವ ಬಗ್ಗೆ ಚಿಂತನೆ ನಡೆಸುವುದೇ ಸಹಕಾರಿ ಸಪ್ತಾಹದ ಮುಖ್ಯ ಉದ್ದೇಶವಾಗಿರುತ್ತದೆ. 73ನೇ ಸಹಕಾರ ಸಪ್ತಾಹವನ್ನು “ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ, ಕೌಶಲ್ಯಾಧಾರಿತ, ವೃತ್ತಿಪರ ಸೇವೆ” ఎంబ ಧೈಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಅದೇ ರೀತಿಯಲ್ಲಿ ರಾಜ್ಯಮಟ್ಟದ ಏಳು ದಿನದ ಕಾರ್ಯಕ್ರಮಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ. ನಮ್ಮ ಉಭಯ ಜಿಲ್ಲೆಗಳಲ್ಲೂ ಸಹಕಾರ ಸಪ್ತಾಹವನ್ನು ಅರ್ಥಪೂರ್ಣವಾಗಿ ನಡೆಸಲು ನಿರ್ಧರಿಸಲಾಗಿದೆ. ಮಂಗಳೂರಿನಲ್ಲಿ ನ.20 ರಂದು ರಾಜ್ಯಮಟ್ಟದ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.
“ಪರಿಸರ ಸಂರಕ್ಷಣೆ, ಅಂಗ ಸಮಾನತೆ ಮತ್ತು ವಿಶ್ವ ಶಾಂತಿಗಾಗಿ ಸಹಕಾರ ಸಂಸ್ಥೆಗಳು” ಎಂಬ ವಿಷಯದೊಂದಿಗೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಪೂರ್ವಾಹ್ನ 10 ಗಂಟೆಗೆ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆಯಾಗಿದೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ನಿ., ಮಂಗಳೂರು ಇದರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ., ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ರಿ., ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್ಗಳು/ಸೌಹಾರ್ದ ಸಹಕಾರ ಸಂಘಗಳು, ಎಲ್ಲಾ ವಿಧದ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆಯ ಸಹಯೋಗದೊಂದಿಗೆ ಈ ರಾಜ್ಯಮಟ್ಟದ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಸಹಕಾರ ಸಚಿವರಿಂದ ಉದ್ಘಾಟನೆ:
ರಾಜ್ಯ ಮಟ್ಟದ ಸಹಕಾರ ಸಪ್ತಾಹ ಆಚರಣೆಯ ಸಮಾರಂಭವನ್ನು ಕರ್ನಾಟಕ ಸರ್ಕಾರದ ಮಾನ್ಯ ಸಹಕಾರ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಇವರು ಉದ್ಘಾಟಿಸಲಿರುವರು. “ಸಹಕಾರ ಮಾಣಿಕ್ಯ ಪ್ರಶಸ್ತಿ ಪ್ರದಾನ”ವನ್ನು ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಸ್ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಇವರು ಮಾಡಲಿರುವರು. “ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ”ವನ್ನು ಮಾನ್ಯ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷ ಜಿ.ಟಿ. ದೇವೇಗೌಡ ಇವರು ನೆರವೇರಿಸಲಿದ್ದಾರೆ.
“ಉತ್ತಮ ಸ್ವ-ಸಹಾಯ ಸಂಘಗಳಿಗೆ ಪುರಸ್ಕಾರವನ್ನು ಉಡುಪಿ/ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಮಾಡಲಿರುವರು. ವಸ್ತುಪ್ರದರ್ಶನ ಮಳಿಗೆಗಳ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ನೆರವೇರಿಸಲಿದ್ದಾರೆ. ಸಹಕಾರ ಸಪ್ತಾಹದ ಧ್ವಜಾರೋಹಣವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಇವರು ನೆರವೇರಿಸಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಡಾ| ಎಂ. ಎನ್. ರಾಜೇಂದ್ರ ಕುಮಾರ್ ರವರು ವಹಿಸಲಿರುವರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಪರಿಷತ್ ಶಾಸಕರಾದ ಐವನ್ ಡಿ.ಸೋಜಾ, ಮಂಜುನಾಥ ಭಂಡಾರಿ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ., ಮಾನ್ಯ ಶಾಸಕರು ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ, ವಿಧಾನಪರಿಷತ್ ಶಾಸಕ ಕಿಶೋರ್ ಕುಮಾರ್ ಬೊಟ್ಯಾಡಿ ಇವರು ಭಾಗವಹಿಸಲಿರುವರು. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು ಇದರ ಅಧ್ಯಕ್ಷ ರವಿರಾಜ್ ಹೆಗ್ಡೆ ಇವರು ಗೌರವ ಉಪಸ್ಥಿತರಿರುವರು.
ವಿಶೇಷ ಆಹ್ವಾನಿತರಾಗಿ ಎಸ್.ಬಿ. ಶೆಟ್ಟಣ್ಣನವರ್, ಸರ್ಕಾರದ ಕಾರ್ಯದರ್ಶಿಗಳು, ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ, ವೆಂಕಟೇಶ್ ಎಂ.ವಿ., ಸಹಕಾರ ಸಂಘಗಳ ನಿಬಂಧಕರು, ಕರ್ನಾಟಕ ಸರ್ಕಾರ, ದರ್ಶನ್ ಎಚ್.ವಿ., ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಸುಧೀರ್ ಕುಮಾರ್ ರೆಡ್ಡಿ, ಪೊಲೀಸ್ ಆಯುಕ್ತರು, ಮಂಗಳೂರು ಇವರು ಭಾಗವಹಿಸಲಿರುವರು.
ಸಹಕಾರ ಮಾಣಿಕ್ಯ ಪ್ರಶಸ್ತಿ:
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸುವ ಉದ್ದೇಶದಿಂದ 2024ನೇ ಸಾಲಿನಿಂದ ಸಹಕಾರ ಸಪ್ತಾಹದ ರಾಜ್ಯಮಟ್ಟದ ಸಮಾರಂಭದಲ್ಲಿ “ಸಹಕಾರ ಮಾಣಿಕ್ಯ ಪ್ರಶಸ್ತಿ”ಯನ್ನು ನೀಡಲು ನಿರ್ಧರಿಸಲಾಗಿದ್ದು, ಈ ಬಾರಿಯೂ 2025-26ರಲ್ಲಿ ಸರ್ವಾಂಗೀಣ ಪ್ರಗತಿಯನ್ನು ಸಾಧಿಸಿ ಆಯ್ಕೆಗೊಂಡ 4 ಸಹಕಾರಿ ಸಂಘಗಳಿಗೆ “ಸಹಕಾರ ಮಾಣಿಕ್ಯ ಪ್ರಶಸ್ತಿ”ಯ ಜೊತೆಗೆ 5ಗ್ರಾಂ ಚಿನ್ನದ ಪದಕ, ರೂ.10,000/- ನಗದು ಹಾಗೂ ಪಾರಿತೋಷಕವನ್ನು ನೀಡಿ ಗೌರವಿಸಲಾಗುವುದು.
ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ:
ರಾಜ್ಯಮಟ್ಟದ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳು, ಮಹಿಳಾ ಸಹಕಾರಿ ಸಂಘಗಳು, ಹೈನುಗಾರಿಕೆ ಸಹಕಾರಿ ಸಂಘಗಳು, ಮೀನುಗಾರಿಕಾ ಸಹಕಾರಿ ಸಂಘಗಳು, ಕ್ರೆಡಿಟ್ ಸೊಸೈಟಿಗಳು, ಸೌಹಾರ್ದ ಸಹಕಾರಿ ಸಂಘಗಳಿಗೆ ಹಾಗೂ ಟಿಎಪಿಸಿಎಂಎಸ್ ಮತ್ತು ಶತಮಾನೋತ್ಸವ ಪೂರೈಸಿದ ಸಂಘಗಳನ್ನು ಗೌರವಿಸಲಾಗುವುದು.
ಉತ್ತಮ ಸ್ವ-ಸಹಾಯ ಸಂಘಗಳಿಗೆ ಪುರಸ್ಕಾರ:
ಸಹಕಾರ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ನವೋದಯ ಸ್ವ-ಸಹಾಯ ಗುಂಪುಗಳು ಬಡಜನರ ಆರ್ಥಿಕ ಶಕ್ತಿಯಾಗಿ ಕೆಲಸ ಮಾಡುತ್ತಿವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 35,000 ಕ್ಕೂ ಅಧಿಕ ನವೋದಯ ಸ್ವ-ಸಹಾಯ ಗುಂಪುಗಳಿದ್ದು, ಸಹಕಾರ ಸಪ್ತಾಹದ ಆಚರಣೆಯ ಸಂದರ್ಭದಲ್ಲಿ ಉಭಯ ಜಿಲ್ಲೆಗಳ ಅತ್ಯುತ್ತಮ ಸ್ವ-ಸಹಾಯ ಗುಂಪುಗಳನ್ನು ಪುರಸ್ಕರಿಸಲಾಗುವುದು.
ಸಹಕಾರಿ ಸಪ್ತಾಹದ ಸಂದರ್ಭದಲ್ಲಿ ಪ್ರತೀವರ್ಷದಂತೆ ಈ ಬಾರಿಯೂ ಪತ್ರಿಕಾ ರಂಗದಲ್ಲಿ ಒಬ್ಬರನ್ನು ಮತ್ತು ಮೂಡಬಿದ್ರೆ ತರಬೇತಿ ಕೇಂದ್ರದಲ್ಲಿ ಬ್ಯಾಂಕ್ ವಿಜೇತ ಇಬ್ಬರನ್ನು ಗುರುತಿಸಿ ಗೌರವಿಸಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಬ್ಯಾಂಕ್ ಎಂ.ಡಿ.ಗೋಪಾಲಕೃಷ್ಣ ಭಟ್,ನಿರ್ದೇಶಕ ಜಯರಾಜ್ ಶೆಟ್ಟಿ, ಶಶಿಕುಮಾರ್ ರೈ ಬಾಳ್ಯೊಟ್ಟು ಮತ್ತಿತರರು ಉಪಸ್ಥಿತರಿದ್ದರು.