ಬೆಂಗಳೂರು: ಕರಾವಳಿ ಕರ್ನಾಟಕ ಭಾಗದ ಜನರಿಗೆ ನ್ಯಾಯಾಂಗ ಪ್ರಕ್ರಿಯೆಯನ್ನು ಹತ್ತಿರವಾಗಿಸುವ ಮತ್ತು ಸುಲಭವಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್‌ನ ಸಂಚಾರಿ ಪೀಠವನ್ನು (Circuit Bench) ಸ್ಥಾಪಿಸುವಂತೆ ಕೋರಿ ಅವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಅಧಿಕೃತ ಪ್ರಸ್ತಾವನೆಯ ಪತ್ರವನ್ನು ಬರೆದಿದ್ದಾರೆ.

ಕರ್ನಾಟಕದ ಕರಾವಳಿ ಪ್ರದೇಶಗಳು ರಾಜ್ಯದ ಆರ್ಥಿಕತೆ, ಶಿಕ್ಷಣ, ವ್ಯಾಪಾರ ಮತ್ತು ಸಾಂಸ್ಕೃತಿಕ ಪರಂಪರೆಗೆ ಗಣನೀಯ ಕೊಡುಗೆ ನೀಡುತ್ತಿವೆ ಎಂದು ಸಿಎಂ ಪತ್ರದಲ್ಲಿ ಶ್ಲಾಘಿಸಿದ್ದಾರೆ. ಆದಾಗ್ಯೂ, ಈ ಜಿಲ್ಲೆಗಳ ಸಾರ್ವಜನಿಕರು ಮತ್ತು ವಕೀಲರು ಸಣ್ಣಪುಟ್ಟ ಕಾನೂನು ಹೋರಾಟಗಳಿಗೂ ಬೆಂಗಳೂರಿನ ಪ್ರಧಾನ ಪೀಠಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ಅವರು ಸುದೀರ್ಘ ಪ್ರಯಾಣ ಮಾಡಬೇಕಾಗಿದ್ದು, ಭಾರಿ ಆರ್ಥಿಕ ಮತ್ತು ವ್ಯವಸ್ಥಾಪನಾ ಹೊರೆಯನ್ನು ಅನುಭವಿಸುತ್ತಿದ್ದಾರೆ. ಇದು ನ್ಯಾಯ ವಿಲೇವಾರಿಯಲ್ಲಿ ವಿಳಂಬಕ್ಕೆ ಕಾರಣವಾಗುತ್ತಿದ್ದು, ಈ ಸಮಸ್ಯೆಗೆ ಮುಕ್ತಿ ನೀಡಲು ಮಂಗಳೂರಿನಲ್ಲಿ ಸಂಚಾರಿ ಪೀಠದ ಅಗತ್ಯವಿದೆ ಎಂದು ಸಿಎಂ ಪ್ರತಿಪಾದಿಸಿದ್ದಾರೆ.

50,000 ಚದರ ಅಡಿ ವಿಸ್ತೀರ್ಣದ ಸಿದ್ಧ ಕಟ್ಟಡ: ಸರ್ಕಾರದ ಗ್ರೀನ್ ಸಿಗ್ನಲ್!
ಮಂಗಳೂರಿನಲ್ಲಿ ಸಂಚಾರಿ ಪೀಠದ ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ತಕ್ಷಣವೇ ಒದಗಿಸಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಸಿದ್ದರಾಮಯ್ಯನವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನ ಹಳೆಯ ಉಪವಿಭಾಗಾಧಿಕಾರಿಗಳ (Old DC Office) ಕಚೇರಿಯಲ್ಲಿ ಸುಮಾರು 50,000 ಚದರ ಅಡಿಯ ವಿಶಾಲವಾದ ಆವರಣವನ್ನು ಗುರುತಿಸಲಾಗಿದ್ದು, ಇದನ್ನು ತಕ್ಷಣವೇ ನ್ಯಾಯಾಲಯದ ಕಲಾಪಕ್ಕೆ ಬಳಸಿಕೊಳ್ಳಬಹುದು. ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ಅಗತ್ಯವಿರುವ ವಸತಿ ಸೌಕರ್ಯಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಯಾವುದೇ ವಿಳಂಬವಿಲ್ಲದೆ ಅದನ್ನು ಸಜ್ಜುಗೊಳಿಸಲಾಗುವುದು. ಪೀಠದ ಸುಗಮ ಕಾರ್ಯನಿರ್ವಹಣೆಗೆ ಅಗತ್ಯವಿರುವ ನಾಗರಿಕ, ಆಡಳಿತಾತ್ಮಕ ಮತ್ತು ವ್ಯವಸ್ಥಾಪನಾ ಸೌಕರ್ಯಗಳು ಈಗಾಗಲೇ ಸಿದ್ಧವಾಗಿವೆ ಎಂದು ಸಿಎಂ ಉಲ್ಲೇಖಿಸಿದ್ದಾರೆ.

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎನ್ನುವುದು ಕರಾವಳಿ ಭಾಗದ ವಕೀಲರ ಸಂಘಗಳು, ನಾಗರಿಕ ಸಮಾಜ ಮತ್ತು ಸಾರ್ವಜನಿಕರ ದಶಕಗಳ ಹಳೆಯ ಹಾಗೂ ನಿರಂತರ ಬೇಡಿಕೆಯಾಗಿದೆ. ಈ ಪ್ರಸ್ತಾವನೆಯು ಕೇವಲ ಆಡಳಿತಾತ್ಮಕ ನಿರ್ಧಾರವಾಗಿರದೆ, ಪ್ರಾದೇಶಿಕ ಸಮಾನತೆ ಮತ್ತು ನ್ಯಾಯಾಂಗದ ದಕ್ಷತೆಯನ್ನು ಹೆಚ್ಚಿಸುವ ವಿಶಾಲ ದೃಷ್ಟಿಕೋನವನ್ನು ಹೊಂದಿದೆ ಎಂದು ಸಿಎಂ ತಿಳಿಸಿದ್ದಾರೆ. ಕರಾವಳಿ ಭಾಗದಲ್ಲಿ ಸಂಚಾರಿ ಪೀಠ ಸ್ಥಾಪನೆಯಾಗುವುದರಿಂದ ಬೆಂಗಳೂರಿನ ಪ್ರಧಾನ ಪೀಠದ ಮೇಲಿರುವ ಪ್ರಕರಣಗಳ ಹೊರೆ ತಗ್ಗಲಿದ್ದು, ಜನಸಾಮಾನ್ಯರಿಗೆ ಸಕಾಲದಲ್ಲಿ ನ್ಯಾಯ ಸಿಗಲಿದೆ ಎಂದು ಮುಖ್ಯಮಂತ್ರಿ ಪತ್ರದಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.
