ಶಿವಮೊಗ್ಗ: ಅದು ಶಿವಮೊಗ್ಗದ ಜನ್ನಾಪುರ ಮಹಾಗಣಪತಿ ದೇವಾಲಯ. ಮಂತ್ರಘೋಷಗಳ ನಡುವೆ ಅಲ್ಲಿ ವಿಶೇಷವಾದೊಂದು ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಅದು ಕೇವಲ ಪೂಜೆಯಾಗಿರಲಿಲ್ಲ; ಬದಲಿಗೆ ಪ್ರೀತಿ ಮತ್ತು ಭವಿಷ್ಯದ ಕನಸಿಗಾಗಿ ನಡೆದ ಒಂದು ʻಘರ್ ವಾಪ್ಸಿ’ (Ghar Wapsi) ಪ್ರಕ್ರಿಯೆಯಾಗಿತ್ತು! ತಾನು ಪ್ರೀತಿಸಿದ ಹಿಂದೂ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು, ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದ ಯುವತಿಯೊಬ್ಬಳು ಯಾವುದೇ ಒತ್ತಡವಿಲ್ಲದೆ ಸೌಹಾರ್ದಯುತವಾಗಿ ಮತ್ತೆ ಹಿಂದೂ ಧರ್ಮಕ್ಕೆ ಮರಳಿರುವ ಅಪರೂಪದ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.

ಮೂಲತಃ ಶಿವಮೊಗ್ಗ ಹನುಮಂತನಗರದ ಸಿಗೇಬಾಗಿಯ ಈ ಕುಟುಂಬ ಮೊದಲಿಗೆ ಹಿಂದೂ ಧರ್ಮಕ್ಕೇ ಸೇರಿತ್ತು. ಆದರೆ, ಕೆಲವು ವರ್ಷಗಳ ಹಿಂದೆ ಕಾರಣಾಂತರಗಳಿಂದ ಈ ಕುಟುಂಬ ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿತ್ತು. ಅಲ್ಲಿ ಈ ಯುವತಿಗೆ ʻಆರೋಗ್ಯಕರ ಪ್ರಿಯಾʼ ಎಂದು ಹೆಸರಿಡಲಾಗಿತ್ತು. ಆದರೆ, ಕಾಲಚಕ್ರ ಉರುಳಿದಂತೆ ಆಕೆಯ ಬದುಕಿನಲ್ಲಿ ಪ್ರೀತಿಯ ಎಂಟ್ರಿಯಾಗಿ ಇಡೀ ಕಥೆಯೇ ಬದಲಾಯಿತು!

ಆರೋಗ್ಯಕರ ಪ್ರಿಯಾ ಮತ್ತು ಭದ್ರಾವತಿ ತಾಲೂಕಿನ ಅಂತರಗಂಗೆಯ ನಿವಾಸಿ ಎಂ.ಶಿವಕುಮಾರ್ ಕಳೆದ 5 ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದರು. ಈ ಸ್ನೇಹ ಕಳೆದ 2 ವರ್ಷಗಳಿಂದ ಗಾಢವಾದ ಪ್ರೀತಿಯಾಗಿ ಬದಲಾಗಿತ್ತು. ಮದುವೆಯಾಗಲು ನಿರ್ಧರಿಸಿದಾಗ ಇಬ್ಬರ ಮುಂದಿದ್ದ ದೊಡ್ಡ ಸವಾಲೇ ಧರ್ಮ! ಈ ಬಗ್ಗೆ ಸ್ವತಃ ಪ್ರಿಯಾ ಮಾತನಾಡಿದ್ದು, “ನಾವು ಬೇರೆ ಬೇರೆ ಧರ್ಮದಲ್ಲಿದ್ದು ಮದುವೆಯಾದರೆ ಭವಿಷ್ಯದಲ್ಲಿ ತೊಂದರೆಯಾಗುತ್ತದೆ. ಆದ್ದರಿಂದ ನಾನೇ ಇಷ್ಟಪಟ್ಟು, ನನ್ನ ಭವಿಷ್ಯದ ದೃಷ್ಟಿಯಿಂದ ಹಿಂದೂ ಧರ್ಮಕ್ಕೆ ಮರಳುವ ತೀರ್ಮಾನ ಕೈಗೊಂಡೆ” ಎಂದು ಸ್ಪಷ್ಟಪಡಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ ಪ್ರಮುಖ ಪಾತ್ರ
ಈ ಇಡೀ ಪ್ರಕ್ರಿಯೆಯಲ್ಲಿ ಭದ್ರಾವತಿಯ ವಿಶ್ವ ಹಿಂದೂ ಪರಿಷತ್ (VHP) ಪ್ರಮುಖ ಪಾತ್ರ ವಹಿಸಿದೆ. ಜನ್ನಾಪುರ ಮಹಾಗಣಪತಿ ದೇವಾಲಯದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳ ಮೂಲಕ ಯುವತಿಯನ್ನು ಪುನಃ ಹಿಂದೂ ಧರ್ಮಕ್ಕೆ ಬರಮಾಡಿಕೊಳ್ಳಲಾಯಿತು. ಮತಾಂತರ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಆಕೆಯ ಹೆಸರಲ್ಲಿದ್ದ “ಆರೋಗ್ಯಕರ ಪ್ರಿಯಾ” ಎಂಬ ಪದವನ್ನು ತೆಗೆದು, “ಪ್ರಿಯಾ” ಎಂದು ಅಧಿಕೃತವಾಗಿ ಬದಲಾಯಿಸಲಾಯಿತು. ಈ ವೇಳೆ ಪ್ರಿಯಕರ ಶಿವಕುಮಾರ್ ಮಾತನಾಡಿ, “ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಮತಾಂತರ ನಡೆದಿದೆ. ಪ್ರಿಯಾ ನನಗೋಸ್ಕರ ಮತ್ತೆ ಹಿಂದೂ ಧರ್ಮಕ್ಕೆ ಬಂದಿರುವುದು ನನಗೆ ಭಾರಿ ಖುಷಿ ತಂದಿದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಪ್ರೇಮಿಗಳ ಕಥೆ ಕೇವಲ ಮತಾಂತರಕ್ಕೆ ನಿಂತಿಲ್ಲ. ಮುಂದಿನ ಮೇ 24 ರಂದು ವಿಶ್ವ ಹಿಂದೂ ಪರಿಷತ್ ಆಯೋಜಿಸಿರುವ ಭವ್ಯ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪ್ರಿಯಾ ಮತ್ತು ಶಿವಕುಮಾರ್ ಅವರ ವಿವಾಹ ಮಹೋತ್ಸವವು ಹಿಂದೂ ಧರ್ಮದ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನೆರವೇರಲಿದೆ. ಸದ್ಯ ಎಲ್ಲರೂ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಪ್ರಿಯಾ ತಿಳಿಸಿದ್ದು, ಈ ವಿಶಿಷ್ಟ ಪ್ರೇಮದ ಯಶೋಗಾಥೆ ಜಿಲ್ಲಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.