ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್‌. ವಸಂತ ಬೆರ್ನಾರ್ಡ್ ರಿಗೆ ರಾಜ್ಯಮಟ್ಟದ “ಸಹಕಾರ ರತ್ನ” ಗೌರವ!

ಮಂಗಳೂರು: ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನೀಡಲಾಗುವ ರಾಜ್ಯಮಟ್ಟದ ಸಹಕಾರ ರತ್ನ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಸಹಕಾರಿಗಳಾದ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷ ಎಚ್‌. ವಸಂತ ಬೆರ್ನಾರ್ಡ್ ‌ಅವರು ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸಂಜೆ ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದ್ದು, ಬೆರ್ನಾರ್ಡ್ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಸಹಕಾರಿಗಳು ಈ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ನವೆಂಬರ್‌ 14ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವತಿಯಿಂದ ನಡೆಯುವ ರಾಜ್ಯಮಟ್ಟದ ಸಹಕಾರ ಸಪ್ತಾಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಎಚ್‌. ವಸಂತ ಬೆರ್ನಾರ್ಡ್ ಅವರು ಪ್ರಿಯದರ್ಶಿನಿ ಸಹಕಾರ ಸಂಘ (ನಿ.), ಹಳೆಯಂಗಡಿ ಇದರ ಅಧ್ಯಕ್ಷರು. ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕರಾಗಿ ಸುಧೀರ್ಘ 31 ವರ್ಷಗಳಿಂದ ನಿರ್ದೇಶಕರಾಗಿದ್ದರು. 2021ರಲ್ಲಿ ಹಳೆಯಂಗಡಿಯಲ್ಲಿ ಪ್ರಿಯದರ್ಶಿನಿ ಸಹಕಾರ ಸಂಘವನ್ನು ಸ್ಥಾಪಿಸಿ ಅತ್ಯಲ್ಪ ಅವಧಿಯಲ್ಲೇ ಉಭಯ ಜಿಲ್ಲೆಗಳಲ್ಲಿ ಗುರುತಿಸಲ್ಪಟ್ಟ ಪ್ರಗತಿಪರ ಸಹಕಾರಿ ಸಂಸ್ಥೆಯಾಗಿ ರೂಪಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

error: Content is protected !!