
ಬೆಂಗಳೂರು: ಪೆಟ್ರೋಲ್, ಡಿಸೇಲ್ ದರ ಏರಿಕೆ ಬೆನ್ನಲ್ಲೇ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಿದ್ದು, ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘ ಮಾಹಿತಿ ನೀಡಿದೆ.

ಟಿಕೆಟ್ ದರವನ್ನು 20ರಿಂದ 30% ಏರಿಕೆ ಮಾಡಲಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಪ್ರತಿದಿನ ಖಾಸಗಿ ಬಸ್ ಮಾಲೀಕರು ಕನಿಷ್ಠ 150 ಲೀಟರ್ ಆಯಿಲ್ ಹಾಕಿಸಿಕೊಳ್ಳಬೇಕು. ನಮಗೆ ಪ್ರತಿ ಟ್ರಿಪ್‌ಗೆ ಹೆಚ್ಚುವರಿಯಾಗಿ 450 ರೂ. ಅಂದರೆ ಹೊರೆ ಆಗಲಿದೆ. ಹೀಗಾಗಿ ಅನಿವಾರ್ಯವಾಗಿ ದರ ಏರಿಕೆ ಮಾಡುತ್ತಿದ್ದೇವೆ. ಇದರ ಪರಿಣಾಮ ಪ್ರಯಾಣಿಕರ ಮೇಲೆ ಬೀಳಲಿದೆ ಎಂದಿದ್ದಾರೆ.

ಸ್ಕೂಲ್ ವಾಹನಗಳ ದರ 10% ವರೆಗೆ ಏರಿಕೆ ಮಾಡಲಾಗಿದ್ದು, ಇದರ ಜೊತೆಗೆ ರಾಜ್ಯ ಟ್ರ್ಯಾವೆಲ್ ಪಾಸೆಂಜರ್ ವಾಹನಗಳ ದರವೂ 10%-15%ನಷ್ಟು ಏರಿಕೆಯಾಗಲಿದೆ.

ಒಲಾ, ಉಬರ್ ದರ ಏರಿಕೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸೋಮವಾರ(ಮೇ 18) ಚಾಲಕರ ಸಂಘದಿಂದ ಸಭೆ ನಡೆಯಲಿದೆ. ಸಭೆಯ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಿದ್ಧತೆ ನಡೆಯುತ್ತಿದ್ದು, ದರ ಏರಿಕೆಗೆ ಪ್ರಸ್ತಾವನೆಗೆ ಒತ್ತಡ ಹೇರಲು ತಯಾರಿ ನಡೆಸಿದೆ.