ಉಡುಪಿ: ಇಲ್ಲಿನ ನೇಜಾರ್‌ನ ಜ್ಯೋತಿನಗರದ 6ನೇ ಕ್ರಾಸ್ ಬಳಿ ಇಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ 12 ವರ್ಷದ ಶಾಲಾ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಮೃತನನ್ನು 6ನೇ ತರಗತಿ ವಿದ್ಯಾರ್ಥಿ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ.

ಬಾಲಕ ಅಬ್ದುಲ್ ರೆಹಮಾನ್ ಜ್ಯೋತಿನಗರದ 6ನೇ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಕಾರೊಂದು ಆತನಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕ ತೀವ್ರವಾಗಿ ಗಾಯಗೊಂಡು ರಸ್ತೆಗೆ ಬಿದ್ದಿದ್ದಾನೆ.

ಅಪಘಾತ ಸಂಭವಿಸುತ್ತಿದ್ದಂತೆ ತಕ್ಷಣವೇ ಸ್ಥಳೀಯರು ಹಾಗೂ ಸಾರ್ವಜನಿಕರು ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಬಾಲಕನನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಬಾಲಕ ಮೃತಪಟ್ಟಿದ್ದು, ಆತನನ್ನು ಪರೀಕ್ಷಿಸಿದ ವೈದ್ಯರು ಆತ ಆಗಲೇ ಮೃತಪಟ್ಟಿರುವುದಾಗಿ (Brought Dead) ಘೋಷಿಸಿದ್ದಾರೆ.

ಮೃತ ಅಬ್ದುಲ್ ರೆಹಮಾನ್ ಸ್ಥಳೀಯ ‘ಸಾಲಿಹಾತ್ ಶಿಕ್ಷಣ ಸಂಸ್ಥೆ’ಯ 6ನೇ ತರಗತಿಯ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನು. ತರಗತಿಯಲ್ಲಿ ಎಲ್ಲರ ನೆಚ್ಚಿನ ವಿದ್ಯಾರ್ಥಿಯಾಗಿದ್ದ ಬಾಲಕನ ಅಕಾಲಿಕ ಮರಣಕ್ಕೆ ಸಾಲಿಹಾತ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಸಹಪಾಠಿ ವಿದ್ಯಾರ್ಥಿಗಳು ತೀವ್ರ ಕಂಬನಿ ಮಿಡಿದು, ಶೋಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
