ಮೇ 17ರಂದು ಮಂಗಳೂರಿನಲ್ಲಿ ತರವಾಡ್” ಬ್ಯಾರಿ ಕಾದಂಬರಿಯ ತುಲನಾತ್ಮಕ ಹಿನ್ನೋಟ ಕಾರ್ಯಕ್ರಮ

ಮಂಗಳೂರು: ನಗರದ ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ (BRDC) ವತಿಯಿಂದ ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಜನಸಮುದಾಯದ ಸಂಶೋಧನೆಯ ಅಂಗವಾಗಿ ದಿ|| ಕಾಸಿಮ್ ಉಳ್ಳಾಲ್ ಅವರ ಪ್ರಸಿದ್ಧ “ತರವಾಡ್” ಬ್ಯಾರಿ ಕಾದಂಬರಿಯ ತುಲನಾತ್ಮಕ ಹಿನ್ನೋಟ ಮತ್ತು ಸಾಹಿತಿಗಳ-ಬರಹಗಾರರ ಕೂಡುವಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಮೇ 17ರ ಭಾನುವಾರ ಅಪರಾಹ್ನ 2.30ಕ್ಕೆ ಮಂಗಳೂರಿನ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಡಾ|| ಶಿವರಾಮ ಕಾರಂತ ಭವನದಲ್ಲಿ ಜರುಗಲಿದೆ.

ಈ ಮಹತ್ವದ ಸಾಹಿತ್ಯಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಾ|| ಬಿ.ಎಮ್. ಫಾರೂಕ್ ನೆರವೇರಿಸಲಿದ್ದಾರೆ. ತದನಂತರ, “ತರವಾಡ್” ಕಾದಂಬರಿಯ ಸುದೀರ್ಘ ಅವಲೋಕನವನ್ನು ಖ್ಯಾತ ಕಥೆಗಾರರಾದ ಮುನವ್ವರ್ ಜೋಗಿಬೆಟ್ಟು ಅವರು ನಡೆಸಿಕೊಡಲಿದ್ದಾರೆ. ಹಿರಿಯ ಸಾಹಿತಿ ಹಾಗೂ ಪತ್ರಕರ್ತರಾದ ಬಿ.ಎಂ. ಹನೀಫ್ ಅವರು ಕಾದಂಬರಿಯ ಸಾಹಿತ್ಯಿಕ ಮೌಲ್ಯಗಳ ಕುರಿತು ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಉಮರ್ ಯು.ಎಚ್., ಬ್ಯಾರಿ ಅಧ್ಯಯನ ಪೀಠದ ಸಂಯೋಜಕರಾದ ಡಾ|| ಅಬೂಬಕ್ಕರ್ ಸಿದ್ದೀಕ್ ಹಾಗೂ ಪ್ರಮುಖರಾದ ದಿ|| ಯು.ಎ. ಖಾಸಿಮ್ ಅವರ ಪುತ್ರ ಝುಲ್ಫಿಕರ್ ಖಾಸಿಮ್ ಅವರು ಭಾಗವಹಿಸಲಿದ್ದಾರೆ. ಬ್ಯಾರಿ ಜನಸಮುದಾಯದ ಹಿರಿಯ ಹಾಗೂ ಕಿರಿಯ ಸಾಹಿತಿಗಳು ಮತ್ತು ಬರಹಗಾರರು ಒಟ್ಟಾಗಿ ಸೇರಿ “ತರವಾಡ್” ಕಾದಂಬರಿಯ ಭಾಷೆ ಮತ್ತು ಸಂಸ್ಕೃತಿಯ ವಿಭಿನ್ನ ಆಯಾಮಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ.

ಇಡೀ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷರಾದ ಬಿ.ಎ. ಮೊಹಮ್ಮದ್ ಹನೀಫ್ ಅವರು ವಹಿಸಲಿದ್ದಾರೆ ಎಂದು ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ ಅಧಿಕೃತ ಪ್ರಕಟಣೆ ತಿಳಿಸಿದೆ. ಮಂಗಳೂರು ಮತ್ತು ಸುತ್ತಮುತ್ತಲಿನ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

error: Content is protected !!