
ಮಂಗಳೂರು: ಭಾರತ ಸರ್ಕಾರದ ಆಯುಷ್ ಸಚಿವಾಲಯ ಕೈಗೊಂಡಿರುವ ದೂರದರ್ಶಿ ಯೋಜನೆಯನುಗುಣವಾಗಿ, ಮೈತ್ರೇಯಿ ಆಯುರ್ವೇದ ಗುರುಕುಲ ಪ್ರಾಚೀನ ಗುರುಕುಲ ಪರಂಪರೆಯನ್ನು ಪುನರುಜ್ಜಿವನಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಭಾರತೀಯ ವೈದ್ಯಕೀಯ ವ್ಯವಸ್ಥೆಗಳ ಆಯೋಗ (NCISM) ನಿಯಮಾವಳಿಯಡಿಯಲ್ಲಿ ವರ್ಷದ(ಕಡ್ಡಾಯ ವಸತಿ ಸಹಿತ) ಆಯುರ್ವೇದ ಗುರುಕುಲ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ. ಈ ತರಬೇತಿಯು 2 ವರ್ಷ PUC, 4.1/2 ವರ್ಷ BAMS ಮತ್ತು 1 ವರ್ಷದ Internship ನ್ನು ಒಳಗೊಂಡಿರುತ್ತದೆ. ಈ ಮೂಲಕ ಉತ್ತಮ ಆಯುರ್ವೇದ ವೈದ್ಯರನ್ನು ಸಮಾಜಕ್ಕೆ ಕೊಡುವುದೇ ಗುರುಕುಲದ ಮೂಲ ಉದ್ದೇಶವಾಗಿದೆ ಎಂದು ಮೈತ್ರೇಯಿ ಆಯುರ್ವೇದ ಗುರುಕುಲದ ಪ್ರಾಂಶುಪಾಲರಾದ ಡಾ.ರವಿಗಣೇಶ್ ಮೊಗ್ರ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಪ್ರತಿ ರಾಜ್ಯದ 5 ಕೋಟಿ ಜನಸಂಖ್ಯೆಗೆ ಒಂದು ಆಯುರ್ವೇದ ಗುರುಕುಲಕ್ಕೆ ಅನುಮತಿ ನೀಡಲಾಗಿದೆ ಮತ್ತು ಕರ್ನಾಟಕದಲ್ಲಿ ಮೈತ್ರೇಯಿ ಆಯುರ್ವೇದ ಗುರುಕುಲವು ಪ್ರಪ್ರಥಮವಾಗಿದೆ.
2026ನೇ ಸಾಲಿನ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿರುವ ಮೈತ್ರೇಯಿ ಆಯುರ್ವೇದ ಗುರುಕುಲವು ಜೀ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಮಾನ್ಯತೆಯನ್ನು ಪಡೆದಿರುತ್ತದೆ. 10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ NEET-PA (Pre-Ayurveda Programme) ಮೂಲಕ ಪ್ರವೇಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಬಳಿಕ ಮಾತಾಡಿದ ಟ್ರಷ್ಟಿ ಡಾ.ಸುಧಾ ರಾವ್ ಅವರು, “2026ನೇ ಸಾಲಿನ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ದಿನಾಂಕ 20 ಆಗಸ್ಟ್ 2026 ಕೊನೆಯ ದಿನಾಂಕವಾಗಿದೆ. ಮೈತ್ರೇಯಿ ಆಯುರ್ವೇದ ಗುರುಕುಲವು ಹೆಣ್ಣು ಮಕ್ಕಳಿಗೆ ಮಾತ್ರ ವಿದ್ಯಾಭ್ಯಾಸವನ್ನು ನೀಡುವ ಅನುಮತಿ ಹೊಂದಿದೆ. ಆಯುರ್ವೇದ ಗುರುಕುಲದ ತರಬೇತಿಗೆ ಶುಲ್ಕ ನಿರ್ಧಾರ ಪ್ರಗತಿಯ ಹಂತದಲ್ಲಿದೆ. ಪ್ರತಿ ಬ್ಯಾಚ್‌ಗೆ 50 ವಿದ್ಯಾರ್ಥಿನಿಯರಿಗೆ ಪ್ರವೇಶವಿದೆ“ ಎಂದರು.
Pre-Ayurveda (PUC-2 ವರ್ಷ) ಈ ಕೆಳಗಿನ ವಿಷಯಗಳನ್ನು ಹೊಂದಿರುತ್ತದೆ.
ಭೌತಶಾಸ್ತ್ರ
ರಸಾಯನಶಾಸ್ತ್ರ
ಜೀವಶಾಸ್ತ್ರ
ಗಣಿತ
ಸಂಸ್ಕೃತ
ಆಯುರ್ವೇದದ ಮೂಲಭೂತ ತತ್ವಗಳು:
ಪ್ರಸ್ತಾವಿತ ಸಂಸ್ಥೆಯು ಈ ಕೆಳಗಿನ ಅಂಶಗಳನ್ನು ಒಳಗೊಂಡ ಸಮಗ್ರ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ:
ಮೌಲ್ಯಾಧಾರಿತ ಶಿಕ್ಷಣ, ಪ್ರಾಮಾಣಿಕ ಆಯುರ್ವೇದ ಚಿಕಿತ್ಸಾ ಸೇವೆಗಳು, ಸಂಸ್ಕೃತದಲ್ಲಿ ಗಾಢವಾದ ಜ್ಞಾನವನ್ನು ಮೂಡಿಸುವುದು, ಸಾಂಪ್ರದಾಯಿಕ ಗುರುಕುಲ ಶಿಕ್ಷಣವನ್ನು ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸುವುದು.
ವಿಶೇಷ ಅಂಶಗಳು:
ಪ್ರಸ್ತಾವಿತ 60 ಹಾಸಿಗೆಗಳ ಆಯುರ್ವೇದ ಆಸ್ಪತ್ರೆಯು ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳ ವಿಶಾಲ ಜನಸಂಖ್ಯೆಗೆ ಆರೋಗ್ಯ ಸೇವೆಗಳನ್ನು ಒದಗಿಸಲು ಅತ್ಯಂತ ಅನುಕೂಲಕರವಾಗಿದೆ.
ಪಂಚಕರ್ಮ, ಕಾಯಕಲ್ಪ ಹಾಗೂ ಇತರ ವಿಶೇಷ ಆಯುರ್ವೇದ ಚಿಕಿತ್ಸಾ ಸೇವೆಗಳನ್ನು ಲಭ್ಯಗೊಳಿಸುವುದು.
ಆಯುರ್ವೇದ ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ತರಬೇತಿ ಮತ್ತು ಪ್ರಾಯೋಗಿಕ ಅನುಭವ, ಸಂಶೋಧನೆ ಹಾಗೂ ಸಮುದಾಯ ಆರೋಗ್ಯ ಕಾರ್ಯಕ್ರಮಗಳನ್ನು ಉತ್ತೇಜಿಸುವುದು, ಸ್ಥಳೀಯ ಸಮುದಾಯದ ಆರೋಗ್ಯ ಜಾಗೃತಿ ಮತ್ತು ಜೀವನಮಟ್ಟವನ್ನು ಸುಧಾರಿಸುವುದು.
ಮೈತ್ರೇಯಿ ಗುರುಕುಲ ಕುರಿತು:
1994ರಲ್ಲಿ ಸ್ಥಾಪಿತವಾದ ಮೈತ್ರೇಯಿ ಗುರುಕುಲವು ಕಳೆದ ಮೂರು ದಶಕಗಳಿಗೂ ಅಧಿಕ ಅವಧಿಯಿಂದ ಮೌಲ್ಯಾಧಾರಿತ ವಸತಿ ಶಿಕ್ಷಣದ ಮೂಲಕ ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಅರ್ಹ ಬಾಲಕಿಯರ ಸಬಲೀಕರಣವನ್ನು ಉದ್ದೇಶವನ್ನಾಗಿಸಿಕೊಂಡು ಸಂಸ್ಥೆಯು ಈ ಕೆಳಗಿನ ಸೌಲಭ್ಯಗಳನ್ನು ಉಚಿತವಾಗಿ ಒದಗಿಸುತ್ತಿದೆ.
ಉಚಿತ ಶಿಕ್ಷಣ
ಉಚಿತ ವಸತಿ ಹಾಗೂ ಆಹಾರ
ಭಾರತೀಯ ಸಂಸ್ಕೃತಿ, ಸಂಸ್ಕಾರ, ನೈತಿಕ ಮೌಲ್ಯಗಳನ್ನು ಆಧರಿಸಿ ವಸತಿ ವಾತಾವರಣ.
ನಮ್ಮ ಧೈಯವು ಜ್ಞಾನ, ಸಂಸ್ಕಾರ, ಕರುಣೆ ಹಾಗೂ ಸಾಮಾಜಿಕ ಹೊಣೆಗಾರಿಕೆ ವ್ಯಕ್ತಿಗಳನ್ನು ರೂಪಿಸುವುದಾಗಿದೆ. ಭಾರತದ ಸಮೃದ್ಧ ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಪರಂಪರೆಯನ್ನು ಸಂರಕ್ಷಿಸುತ್ತಾ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವ ನಾಗರಿಕರನ್ನು ಬೆಳೆಸುವುದು ನಮ್ಮ ಉದ್ದೇಶವಾಗಿದೆ.
ಸಂಸ್ಥೆಯು ವೇದ-ಶಾಸ್ತ್ರ ಪರಂಪರೆಯ ಸಂರಕ್ಷಣೆ ಹಾಗೂ ಯುವಜನರಲ್ಲಿ ರಾಷ್ಟ್ರನಿಷ್ಠೆಯನ್ನು ಬೆಳೆಸುವ ಕಾರ್ಯಕ್ಕೆ ಬದ್ಧವಾಗಿದೆ.
ಮೈತ್ರೇಯಿ ಗುರುಕುಲವು ಪಂಚಮುಖಿ ಶಿಕ್ಷಣ ಎಂಬ ಸಮಗ್ರ ಶಿಕ್ಷಣ ಪದ್ಧತಿಯನ್ನು ಅನುಸರಿಸುತ್ತದೆ. ವೇದ,ಯೋಗ,ವಿಜ್ಞಾನ, ಕೃಷಿ ಮತ್ತು ಕಲಾಕೌಶಲಗಳನ್ನು ಸಮನ್ವಯಗೊಳಿಸಿದ ಐದು ಆಯಾಮಗಳ ಶಿಕ್ಷಣ ವ್ಯವಸ್ಥೆಯಾಗಿದೆ.
ಈ ಸಮಗ್ರ ಶಿಕ್ಷಣ ವ್ಯವಸ್ಥೆಯು ಪ್ರತಿಯೊಬ್ಬ ವಿದ್ಯಾರ್ಥಿನಿಯರ ಸರ್ವಾಂಗೀಣ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿಯಾಗಿದ್ದು, ಜ್ಞಾನವಂತ, ನೈತಿಕ, ಸ್ವಾವಲಂಬಿ ಹಾಗೂ ಸಮಾಜಮುಖಿ ನಾಗರಿಕರನ್ನಾಗಿ ರೂಪಿಸುತ್ತದೆ.
ನಮ್ಮ ಸಂಕಲ್ಪ:
“ಸಂಸ್ಕಾರಯುತ ಶಿಕ್ಷಣ – ಸಮಗ್ರ ಆರೋಗ್ಯ – ಸಬಲ ಸಮಾಜ”
ಮೈತ್ರೇಯಿ ಆಯುರ್ವೇದ ಗುರುಕುಲವು ಭಾರತೀಯ ಜ್ಞಾನ ಪರಂಪರೆ, ಆಯುರ್ವೇದ, ಸಂಸ್ಕೃತಿ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ಆಧುನಿಕ ಅವಶ್ಯಕತೆಗಳೊಂದಿಗೆ ಸಂಯೋಜಿಸಿ, ಆರೋಗ್ಯವಂತ, ಸಂಸ್ಕಾರವಂತ ಹಾಗೂ ರಾಷ್ಟ್ರನಿಷ್ಠ ಸಮಾಜ ನಿರ್ಮಾಣಕ್ಕೆ ಬದ್ಧವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಅಜೇಯ ಟ್ರಸ್ಟ್‌ನ ಅಧ್ಯಕ್ಷರಾದ ಸುಬ್ರಾಯ ಪೈ, ಅಜೇಯ ಟ್ರಸ್ಟ್‌ನ ಕಾರ್ಯದರ್ಶಿಯಾದ ರೂಪಲೇಖಾ ಉಪಸ್ಥಿತರಿದ್ದರು.