ಸುರತ್ಕಲ್: ಇತಿಹಾಸ ಪ್ರಸಿದ್ಧ ಚೇಳೈರು ಖಂಡಿಗೆಯ ನಂದಿನಿ ನದಿಗೆ ವಿವಿಧ ಮೂಲಗಳಿಂದ ಕಲುಷಿತ ನೀರು ಹಾಗೂ ರಾಸಾಯನಿಕ ತ್ಯಾಜ್ಯಗಳನ್ನು ಅವಾಹಕವಾಗಿ ಬಿಡುತ್ತಿರುವುದರಿಂದ ನದಿ ಸಂಪೂರ್ಣ ಕಲುಷಿತಗೊಂಡಿದೆ. ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಖಂಡಿಗೆ ನದಿ ಉಳಿಸಿ ಹೋರಾಟ ಸಮಿತಿ’ ಹಾಗೂ ಸ್ಥಳೀಯ ಸಾರ್ವಜನಿಕರು ನದಿಯ ದಂಡೆಯಲ್ಲೇ ಹಠಾತ್ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.





ಜಾತ್ರೆಯ ದಿನವೇ ಸಿಡಿದಿದ್ದ ಸಾರ್ವಜನಿಕರ ಆಕ್ರೋಶ:
ಐತಿಹಾಸಿಕ ಖಂಡಿಗೆ ದೈವಸ್ಥಾನದ ಸಾಂಪ್ರದಾಯಿಕ ʻಮೀನು ಹಿಡಿಯುವ ಜಾತ್ರೆ’ಗೆ ನಂದಿನಿ ನದಿ ಬಹಳ ಪ್ರಸಿದ್ಧಿಯಾಗಿದೆ. ಪ್ರತಿವರ್ಷ ಸಾವಿರಾರು ಜನಜಂಗುಳಿಯಿಂದ ತುಂಬಿರುತ್ತಿದ್ದ ನದಿಯಲ್ಲಿ, ಈ ಬಾರಿ ನದಿ ನೀರು ಮಲಿನಗೊಂಡು ಮೀನುಗಳು ನಾಶವಾಗಿರುವ ಕಾರಣ ಮೀನು ಹಿಡಿಯಲು ಬೆರಳೆಣಿಕೆಯಷ್ಟು ಜನರೂ ಬಾರದಿರುವುದು ಸಾರ್ವಜನಿಕರ ತೀವ್ರ ಬೇಸರ ಮತ್ತು ಆಕ್ರೋಶಕ್ಕೆ ಕಾರಣವಾಯಿತು. ಮುಂಚೂರು ವೆಟ್ ವೆಲ್ ಒಳಚರಂಡಿ ನೀರು, ಕೊಡಿಪಾಡಿಯ ತ್ಯಾಜ್ಯ ಸಂಸ್ಕರಣಾ ಘಟಕದ (STP) ನೀರು, ಚೊಕ್ಕಬೆಟ್ಟು ಪರಿಸರದ ಮನೆಗಳ ಕೊಳಚೆ ಹಾಗೂ ಮುಕ್ಕದ ಖಾಸಗಿ ಆಸ್ಪತ್ರೆ, ಕಾಲೇಜು, ಹೋಟೆಲ್‌ಗಳ ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಹರಿಸುತ್ತಿರುವುದೇ ನದಿ ಸಂಪೂರ್ಣ ವಿಷುಕ್ತಗೊಳ್ಳಲು ಕಾರಣವಾಗಿದೆ ಎಂದು ಹೋರಾಟಗಾರರು ದೂರಿದ್ದಾರೆ.

ನಂದಿನಿ ನದಿ ಕಲುಷಿತಗೊಂಡಿರುವುದರಿಂದ ಚೇಳೈರು ಖಂಡಿಗೆ ಭಾಗದ ನೂರಾರು ಕೃಷಿ ಅವಲಂಬಿತ ಕುಟುಂಬಗಳು ಕೃಷಿ ಮಾಡಲಾಗದೆ ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಸುತ್ತಮುತ್ತಲಿನ ಕುಡಿಯುವ ನೀರಿನ ಬಾವಿಗಳೂ ಮಲಿನಗೊಂಡಿದ್ದು, ಭೀಕರ ಆರೋಗ್ಯದ ಸಮಸ್ಯೆ ಎದುರಾಗಿದೆ. ಹೋರಾಟ ಸಮಿತಿಯ ಪ್ರಮುಖರಾದ ಸುಕೇಶ್ ಶೆಟ್ಟಿ ಖಂಡಿಗೆ ಮಾತನಾಡಿ, “ನಮ್ಮ ಸಮಸ್ಯೆ ಪರಿಹಾರವಾಗುವವರೆಗೆ ಈ ಹೋರಾಟ ನಿಲ್ಲುವುದಿಲ್ಲ. ಯಾರದೇ ಒತ್ತಡ, ಹಣದ ಆಸೆಗೆ ಬಲಿಯಾಗದೆ ನದಿಯನ್ನೇ ನಂಬಿರುವ ಜನರ ಉಳಿವಿಗಾಗಿ ಎಷ್ಟೇ ಬಲಿಷ್ಠ ರಾಜಕೀಯ ವ್ಯಕ್ತಿಗಳಿದ್ದರೂ ಅವರ ವಿರುದ್ಧ ಹೋರಾಡುತ್ತೇವೆ,” ಎಂದು ಎಚ್ಚರಿಸಿದರು. ಮಾಜಿ ಪಂಚಾಯತ್ ಅಧ್ಯಕ್ಷ ಜಯಾನಂದ ಮಾತನಾಡಿ, ಎರಡು ವರ್ಷಗಳಿಂದ ನಿರಂತರ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ನದಿಯ ಇಂದಿನ ಸ್ಥಿತಿಗೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳೇ ನೇರ ಹೊಣೆ ಎಂದರು.

ಹೋರಾಟ ಸಮಿತಿಯ ದಿವಾಕರ ಸಾಮಾನಿ ಹಾಗೂ ಧಾರ್ಮಿಕ ಮುಖಂಡ ಕಿರಣ್ ಶೆಟ್ಟಿ ಕೆರೆಮನೆ ಮಾತನಾಡಿ, ಸಮಸ್ಯೆ ನಿವಾರಣೆಯಾಗದಿದ್ದರೆ ಚೇಳೈರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು ಒಟ್ಟಾಗಿ ಮುಂಬರುವ ಎಲ್ಲಾ ಚುನಾವಣೆಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು. ಮತ್ತೊಬ್ಬ ಪ್ರಮುಖರಾದ ನಿತಿನ್ ಶೆಟ್ಟಿ ಖಂಡಿಗೆ ಮಾತನಾಡಿ, “ಇಂದಿನಿಂದ 6 ತಿಂಗಳ ಒಳಗಾಗಿ ನದಿಗೆ ಹರಿಯುವ ಆಸ್ಪತ್ರೆ, ವಸತಿ ಸಮುಚ್ಚಯ ಹಾಗೂ ವೆಟ್ ವೆಲ್‌ನ ಕಲುಷಿತ ನೀರನ್ನು ಜಿಲ್ಲಾಡಳಿತ ಸಂಪೂರ್ಣ ಬಂದ್ ಮಾಡಬೇಕು. ನದಿಯಲ್ಲಿ ಬೆಳೆದಿರುವ ಮಲಿನ ಗಿಡಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಲುಷಿತ ನೀರು ಬಿಡುವ ಪ್ಲಾಂಟ್‌ಗಳನ್ನೇ ಜನರೇ ಮುಂದೆ ನಿಂತು ಬಂದ್ ಮಾಡಲಿದ್ದಾರೆ ಮತ್ತು ಉಗ್ರ ಹೋರಾಟ ಕೈಗೆತ್ತಿಕೊಳ್ಳಲಿದ್ದಾರೆ,” ಎಂದು ಗಡುವು ನೀಡಿದರು.

ಪ್ರತಿಭಟನೆಯಲ್ಲಿ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಮಾಜಿ ಸದಸ್ಯ ವಿನಯಕುಮಾರ್ ಶೆಟ್ಟಿ, ಗಂಗಾಧರ ಪೂಜಾರಿ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.