ಇಂದಿನಿಂದ ಪ್ರಧಾನಿ ಮೋದಿಯ ಐದು ದೇಶಗಳ ಮಹತ್ವದ ಪ್ರವಾಸ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಐದು ದೇಶಗಳ ಮಹತ್ವದ ರಾಜತಾಂತ್ರಿಕ ಪ್ರವಾಸ ಆರಂಭಿಸಲಿದ್ದು, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಸಮಯದಲ್ಲೇ ನಡೆಯುತ್ತಿರುವ ಈ ಪ್ರವಾಸಕ್ಕೆ ರಾಜಕೀಯ ಹಾಗೂ ಆರ್ಥಿಕವಾಗಿ ವಿಶೇಷ ಮಹತ್ವ ಸಿಕ್ಕಿದೆ.

ಪ್ರವಾಸದ ಮೊದಲ ಹಂತವಾಗಿ ಪ್ರಧಾನಿ ಮೋದಿ ಇಂದು ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಭೇಟಿ ನೀಡಲಿದ್ದು, ಬಳಿಕ ಅವರು ನೆದರ್‌ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳಿಗೆ ಸಂಚರಿಸಲಿದ್ದಾರೆ.

ಯುಎಇ ಪ್ರವಾಸದ ವೇಳೆ ಪ್ರಧಾನಿ ಮೋದಿ, ಅಲ್ಲಿನ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಫುಜೈರಾದ ಪೆಟ್ರೋಲಿಯಂ ಸಂಕೀರ್ಣದ ಮೇಲೆ ನಡೆದ ದಾಳಿಯ ಬಳಿಕ ನಡೆಯುತ್ತಿರುವ ಈ ಭೇಟಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ವಿಶೇಷವಾಗಿ ಇಂಧನ ಭದ್ರತೆ, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆ ಕುರಿತು ಉಭಯ ರಾಷ್ಟ್ರಗಳ ನಡುವೆ ಚರ್ಚೆ ನಡೆಯುವ ಸಾಧ್ಯತೆಯಿದೆ.

ನಂತರ ಪ್ರಧಾನಿ ಮೋದಿ ನೆದರ್ಲ್ಯಾಂಡ್ಸ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಪ್ರಧಾನಿ ರಾಬ್ ಜೆಟ್ಟನ್ ಹಾಗೂ ರಾಜ ವಿಲ್ಲೆಮ್-ಅಲೆಕ್ಸಾಂಡರ್ ಅವರನ್ನು ಭೇಟಿ ಮಾಡಲಿದ್ದಾರೆ. ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಕುರಿತ ಮಾತುಕತೆ ಈ ಭೇಟಿಯ ಪ್ರಮುಖ ಅಂಶವಾಗಲಿದೆ.

ಸ್ವೀಡನ್‌ನಲ್ಲಿ ಪ್ರಧಾನಿ ಮೋದಿ ವ್ಯಾಪಾರ, ಹಸಿರು ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಕುರಿತಂತೆ ಚರ್ಚೆ ನಡೆಸಲಿದ್ದಾರೆ. ಗೋಥೆನ್‌ಬರ್ಗ್‌ನಲ್ಲಿ ನಡೆಯಲಿರುವ ‘ಯುರೋಪಿಯನ್ ರೌಂಡ್‌ಟೇಬಲ್ ಫಾರ್ ಇಂಡಸ್ಟ್ರಿ’ ಕಾರ್ಯಕ್ರಮದಲ್ಲೂ ಅವರು ಭಾಗವಹಿಸಲಿದ್ದಾರೆ.

ನಾರ್ವೆ ಪ್ರವಾಸದ ವೇಳೆ ಮೋದಿ ಮೂರನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಕಳೆದ ನಾಲ್ಕು ದಶಕಗಳಲ್ಲಿ ನಾರ್ವೆಗೆ ಭೇಟಿ ನೀಡುತ್ತಿರುವ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಬ್ಲೂ ಎಕಾನಮಿ ಮತ್ತು ಬಾಹ್ಯಾಕಾಶ ಸಂಶೋಧನೆ ಕುರಿತ ಮಹತ್ವದ ಒಪ್ಪಂದಗಳ ಸಾಧ್ಯತೆಯೂ ಇದೆ.

ಪ್ರವಾಸದ ಕೊನೆಯ ಹಂತವಾಗಿ ಪ್ರಧಾನಿ ಮೋದಿ ರೋಮ್‌ಗೆ ಭೇಟಿ ನೀಡಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಧಾನ ಕಚೇರಿಗೂ ಭೇಟಿ ನೀಡಲಿದ್ದಾರೆ.

ಈ ಐದು ರಾಷ್ಟ್ರಗಳ ಪ್ರವಾಸದ ಮೂಲಕ ಭಾರತ ರಕ್ಷಣೆ, ತಂತ್ರಜ್ಞಾನ, ವ್ಯಾಪಾರ ಮತ್ತು ಇಂಧನ ಭದ್ರತೆ ಕ್ಷೇತ್ರಗಳಲ್ಲಿ ಜಾಗತಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ ಎಂದು ತಿಳಿದುಬಂದಿದೆ.

error: Content is protected !!