ಸುರತ್ಕಲ್: ಇಲ್ಲಿನ ಬಾಳ ಬಳಿ ಇರುವ ಕೇಂದ್ರ ಸರ್ಕಾರದ ಅಧೀನದ ಹೆಚ್‌ಪಿಸಿಎಲ್ (HPCL) ಎಲ್‌ಪಿಜಿ ಬಾಟ್ಲಿಂಗ್ ಪ್ಲ್ಯಾಂಟ್‌ನಲ್ಲಿ ಗುತ್ತಿಗೆ ಕಾರ್ಮಿಕರಿಗೆ ಸಕಾಲದಲ್ಲಿ ವೇತನ ನೀಡದೆ ವಂಚಿಸುತ್ತಿರುವ ಆರೋಪದಲ್ಲಿ ದೆಹಲಿ ಮೂಲದ ಏಜೆನ್ಸಿ ವಿರುದ್ಧ ಕಾರ್ಮಿಕರು ಹಠಾತ್ ಮುಷ್ಕರ ಆರಂಭಿಸಿದ್ದಾರೆ. ಜಂಟಿ ಒಪ್ಪಂದದ ನಿಯಮಗಳನ್ನು ಗಾಳಿಗೆ ತೂರಿ ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಿರುವ ಗುತ್ತಿಗೆದಾರನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಘಟಕದ ಮುಂಭಾಗದಲ್ಲೇ ಕಾರ್ಮಿಕರು ಧರಣಿ ಕೂತಿದ್ದಾರೆ.




ಕಳೆದ ಡಿಸೆಂಬರ್ ತಿಂಗಳಿಂದ ದೆಹಲಿ ಮೂಲದ ʻಜಸ್ಟಿನ್ ಗ್ಲೋಬಲ್ ಸರ್ವೀಸ್’ (Justin Global Service) ಎಂಬ ಸಂಸ್ಥೆಯು ಇಲ್ಲಿನ ಕಾರ್ಮಿಕರ ಪೂರೈಕೆಯ ಗುತ್ತಿಗೆಯನ್ನು ಪಡೆದುಕೊಂಡಿದೆ. ಕಾರ್ಮಿಕ ಇಲಾಖೆಯ ನಿಯಮಾವಳಿಗಳ ಪ್ರಕಾರ ಪ್ರತಿ ತಿಂಗಳ 7ನೇ ತಾರೀಖಿನ ಒಳಗಾಗಿ ನೌಕರರ ಖಾತೆಗೆ ವೇತನ ಜಮೆ ಮಾಡಬೇಕಿರುವುದು ಕಡ್ಡಾಯವಾಗಿದೆ. ಆದರೆ, ಈ ಕಾನೂನನ್ನು ಸಂಪೂರ್ಣವಾಗಿ ಮೀರಿರುವ ಗುತ್ತಿಗೆ ಸಂಸ್ಥೆಯು ಪ್ರತಿ ತಿಂಗಳು 10 ರಿಂದ 14ನೇ ತಾರೀಖಿನವರೆಗೆ ವೇತನ ನೀಡದೆ ಸತಾಯಿಸುತ್ತಾ ಬಂದಿದೆ. ಇದರಿಂದಾಗಿ ದಿನಗೂಲಿ ನಂಬಿ ಬದುಕುತ್ತಿರುವ ಕಾರ್ಮಿಕರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಕಾರ್ಮಿಕರು ಆರೋಪಿಸಿದರು.

ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ, ಇದರ ವಿರುದ್ಧ ಯಾರಾದರೂ ಧ್ವನಿ ಎತ್ತಿದರೆ ಅಥವಾ ಕಾರ್ಮಿಕ ಇಲಾಖೆಗೆ ದೂರು ನೀಡಲು ಮುಂದಾದರೆ ಅಂತಹ ಕಾರ್ಮಿಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಧಿಕಾರಿಗಳು ಅಂತವರನ್ನು ಗುರುತಿಸಿಕೊಂಡು ಕೆಲಸದ ವೇಳೆ ಕಿರುಕುಳ ನೀಡುತ್ತಿದ್ದಾರೆ. ಮಾನಸಿಕವಾಗಿ ಹಿಂಸೆ ನೀಡಿ, ಅವರಾಗಿಯೇ ಕೆಲಸ ಬಿಟ್ಟು ಹೋಗುವಂತೆ ತಂತ್ರ ಹೂಡಲಾಗುತ್ತಿದೆ ಎಂದು ಪ್ರತಿಭಟನಾ ನಿರತ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಹೆಚ್‌ಪಿಸಿಎಲ್ ಕಂಪನಿಯ ಉನ್ನತಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ, ಅವರು ಗುತ್ತಿಗೆದಾರನ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಮೂಕಪ್ರೇಕ್ಷಕರಾಗಿದ್ದಾರೆ ಎಂದು ದೂರಿದ್ದಾರೆ.

ಕೇಂದ್ರ ಸರ್ಕಾರದ ಜಿಇಎಂ (GeM – Government e-Marketplace) ಪೋರ್ಟಲ್ ಮೂಲಕ ಟೆಂಡರ್ ಪ್ರಕ್ರಿಯೆ ನಡೆಯುವುದರಿಂದ ಹೊರರಾಜ್ಯಗಳ ಗುತ್ತಿಗೆದಾರರು ಇಲ್ಲಿ ಬಂದು ಸುಲಭವಾಗಿ ಟೆಂಡರ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ, ಈ ದೆಹಲಿ ಮೂಲದ ಸಂಸ್ಥೆಗೆ ಮಂಗಳೂರು ಅಥವಾ ಸುರತ್ಕಲ್‌ನಲ್ಲಿ ಯಾವುದೇ ಅಧಿಕೃತ ಕಚೇರಿಗಳೇ ಇಲ್ಲ. ಕಾರ್ಮಿಕರಿಗೆ ಯಾವುದೇ ತೊಂದರೆಯಾದರೂ ಕೇವಲ ಫೋನ್ ಮುಖಾಂತರವಷ್ಟೇ ಸಂಪರ್ಕಿಸಬೇಕಾದ ಅನಿವಾರ್ಯತೆ ಇದೆ. ಮಾಲೀಕರು ಸ್ಥಳದಲ್ಲಿ ಸಿಗದೇ ಇರುವುದರಿಂದ ಕಾರ್ಮಿಕರ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಆದ್ದರಿಂದ ಸಂಬಂಧಪಟ್ಟ ಕಾರ್ಮಿಕ ಇಲಾಖೆಯ ಉನ್ನತಾಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ, ಸ್ಥಳೀಯ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಕಾರ್ಮಿಕರು ಒತ್ತಾಯಿಸಿದ್ದಾರೆ.
