
ಮಂಗಳೂರು: “ನಾನು ಕೊಂಕಣಿಯಲ್ಲಿ ಬರೆಯಲು ಆರಂಭಿಸುವಾಗಲೂ ವಲ್ಲಿ ವಗ್ಗ ಬರೆಯುತ್ತಿದ್ದರು, ಈಗಲೂ ಸಾತತ್ಯದಿಂದ ಬರೆಯುತ್ತಿದ್ದಾರೆ. ಕಿರಿಯರಾದ ನಮಗೆ ವಲ್ಲಿ ವಗ್ಗ ದೊಡ್ಡಣ್ಣನಂತೆ ಮಾತ್ರವಲ್ಲ, ಅಭಿಪ್ರಾಯ ಭೇದಗಳಿರುವ ಕೊಂಕಣಿ ಲೇಖಕರನ್ನು ಒಗ್ಗೂಡಿಸಿ, ಸಂಬಂದಗಳನ್ನು ದಾರದಲ್ಲಿ ಪೋಣಿಸುವ ದರ್ಜಿಯಂತೆ. ಕೊಂಕಣಿ ಸಾಹಿತ್ಯ ಮತ್ತು ಸಂಘಟನೆಗೆ ಅವರ ಸೇವೆ ಸ್ತುತರ್ಹ್ಯ. ಆರು ದಶಕಗಳಿಂದ ಸತತವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಅವರ ಸಾಹಿತ್ಯವನ್ನು ಸಂಭ್ರಮಿಸುವುದೇ ಅವರಿಗೆ ನಾವು ಸಲ್ಲಿಸಬಹುದಾದ ಶ್ರೇಷ್ಠ ಗೌರವ” ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ, ಹೊಸ ದೆಹಲಿಯ ಕಾರ್ಯಕಾರಿ ಸಮಿತಿಯ ಸದಸ್ಯರೂ, ಕೊಂಕಣಿ ಭಾಷಾ ಸಲಹಾ ಸಮಿತಿಯ ಸಂಚಾಲಕರೂ ಆಗಿರುವ ಕವಿ ಮೆಲ್ವಿನ್ ರೊಡ್ರಿಗಸ್ ಅಭಿಪ್ರಾಯಪಟ್ಟರು.

ಅವರು ವಲ್ಲಿ ವಗ್ಗ, ಮೈಸೂರು ಕಾವ್ಯನಾಮದಿಂದ ಖ್ಯಾತರಾಗಿರುವ, ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ, ಮೂಲತಃ ನಿರ್ಕಾಣ್ – ವಗ್ಗದ ವಲೇರಿಯನ್ ಡಿಸೊಜಾ ಅವರ ವಿಂಚ್ಣಾರ್ ಕಾಣಿಯೊ (ಆಯ್ದ ಕತೆಗಳು) ಕಥಾ ಸಂಗ್ರಹವನ್ನು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಹೋದಯ ಸಭಾಂಗಣದಲ್ಲಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. “ಕಥಾ ಸಾಹಿತ್ಯದಲ್ಲಿ ನಿಖರತೆ, ಔದಾರ್ಯ ಮತ್ತು ಸಂಕ್ಷಿಪ್ತತೆ ಬಹಳ ಮುಖ್ಯವಾದ ಗುಣಗಳು. ವಲ್ಲಿ ವಗ್ಗ ಅವರ ಕತೆಗಳಲ್ಲಿ ಇವು ಡಾಳಾಗಿ ಕಾಣಸಿಗುತ್ತವೆ” ಎಂದು ಮೆಲ್ವಿನ್ ರೊಡ್ರಿಗಸ್ ಅಭಿಪ್ರಾಯ ವ್ಯಕ್ತಪಡಿಸಿದರು.



ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಚ್. ಎಮ್. ಪೆರ್ನಾಲ್ ವಿಂಚ್ಣಾರ್ ಕಾಣಿಯೊ ಕೃತಿಯನ್ನು ಪರಿಚಯಿಸಿದರು. 1964 ರಲ್ಲಿ ಬರವಣಿಗೆ ಆರಂಭಿಸಿ, ಕನ್ನಡದಲ್ಲೂ ಸಾಕಷ್ಟು ಕತೆಗಳನ್ನು ಬರೆದಿರುವ ವಲ್ಲಿ ವಗ್ಗ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಹಿರಿಯ ಕತೆಗಾರರಾಗಿದ್ದು, ಸಮಾಜದಲ್ಲಿ ದುರ್ಲಕ್ಷ್ಯಕ್ಕೊಳಗಾದ ಧಮನಿತ ವರ್ಗದ ಪರವಾಗಿ ನಿಲ್ಲುವುದು ಮತ್ತು ಜೀವಪರತೆಯನ್ನು ಸಾರುವುದೇ ಅವರ ಕತೆಗಳ ಪ್ರಮುಖ ಗುಣ ಎಂದು ಹೇಳಿದ ಎಚ್. ಎಂ. ಪೆರ್ನಾಲ್, ಅವರು 1996 – 1996 – 2026 ಹೀಗೆ ಮೂರು ದಶಕಗಳ ಅಂತರದಲ್ಲಿ ಬರೆದ ತಲಾ ಒಂದೊಂದು ಕತೆಯನ್ನು ದಾಖಲೆಯಾಗಿ ತೆಗೆದುಕೊಂದು ಅವರ ಕತೆಗಳು ಕಾಲಾತೀತ ಮೌಲ್ಯಗಳನ್ನು ಸಾರುವಲ್ಲಿ ಯಶಸ್ವಿಯಾಗಿವೆ ಎಂದು ಅಭಿಪ್ರಾಯಪಟ್ಟರು.

ಶ್ರೀಮತಿ ಲಿಬೇರಾ ಡಿ ಸೊಜಾ ಸ್ವಾಗತಿಸಿ, ವಲ್ಲಿ ವಗ್ಗ ವಂದಿಸಿದರು. ಪುತ್ರ ಲೊಯ್ ಡಿ ಸೊಜಾ ಈ ಸಂದರ್ಭದಲ್ಲಿ ಹಾಜರಿದ್ದರು. ಕವಿ ಟೈಟಸ್ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು.
