ಮಂಗಳೂರು: ನಗರದ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದಲ್ಲಿ ಮೇ 17 ಭಾನುವಾರ ಮತ್ತು ಮೇ 18 ಸೋಮವಾರದಂದು ಎರಡು ದಿನಗಳ ‘ವಿಶ್ವ ಕೊಂಕಣಿ ಸಮಾರೋಹ-2026’ ಜರುಗಲಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 17ರ ಭಾನುವಾರ ಬೆಳಿಗ್ಗೆ ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಉದ್ಘಾಟನಾ ಸಮಾರೋಪ ನಡೆಯಲಿದ್ದು, ಗೋವಾದ ಕಲೆ ಮತ್ತು ಸಂಸ್ಕೃತಿ ಪೋಷಕಿ, ಶಿಕ್ಷಣ ತಜ್ಞೆ ಸುಲಕ್ಷಣಾ ಸಾವಂತ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕುಡುಬಿ ಜಾನಪದ ನೃತ್ಯ ಹಾಗೂ ವಾದ್ಯ ಸಂಗೀತದೊಂದಿಗೆ ಅತಿಥಿಗಳನ್ನು ಸ್ವಾಗತಿಸಲಾಗುವುದು. ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಸಲಹಾ ಮಂಡಳಿ ಸಂಚಾಲಕ ಮೆಲ್ವಿನ್ ರೋಡ್ರಿಗಸ್ ಅಧ್ಯಕ್ಷತೆ ವಹಿಸಲಿದ್ದು, ಉಪಾಧ್ಯಕ್ಷರಾದ ಡಾ. ಕಿರಣ್ ಬುಡ್ಕುಳೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅಂದು ಕೊಂಕಣಿ ಸಾಹಿತ್ಯ ಪ್ರಕಾರಗಳು ಹಾಗೂ ಕಾವ್ಯ-ಕಾದಂಬರಿ ಬೆಳವಣಿಗೆಯ ಕುರಿತು ಪ್ರೊಫೆಸರ್ ಡಾ. ಪ್ರಕಾಶ್ ವಜ್ರೇಕರ್, ಡಾ. ಬಿ. ದೇವದಾಸ್ ಪೈ, ಎಚ್.ಎಂ. ಪೆರ್ನಾಳ್, ಡಾ. ಹನುಮಂತ್ ಸಿ. ಚೋಪ್ಡೇಕರ್ ಹಾಗೂ ಡಾ. ರಮಿತಾ ಪಿ. ಗುರವ್ ಅವರಿಂದ ಮಹತ್ವದ ವಿಚಾರ ಮಂಡನೆ ನಡೆಯಲಿದೆ ಎಂದರು.

ಅದೇ ದಿನ ಮಧ್ಯಾಹ್ನ 2.30ಕ್ಕೆ ಕವಿತಾ ಟ್ರಸ್ಟ್ ವತಿಯಿಂದ ಕೊಂಕಣಿ ಕವಿ ಪಿ.ಜೆ. ಕಾಮತ್ ಅವರ ಜನ್ಮ ಶತಮಾನೋತ್ಸವ ಸ್ಮರಣಾರ್ಥ ʻಕಾವ್ಯಾತ್ಮಕ ಜೀವನದ ಒಂದು ಕವಿ ಪರಿಚಯ’ ಕಾರ್ಯಕ್ರಮ ನಡೆಯಲಿದೆ. ಸಂಜೆ 4.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಕುಮಟಾದ ಲಕ್ಷ್ಮೀನರಸಿಂಹ ಕಲಾಮಂಡಳಿಯವರಿಂದ ‘ನರಸಿಂಹ ಅವತಾರ’ ನೃತ್ಯ ರೂಪಕ, ಮಂಗಳೂರಿನ ಸಾಧನಾ ಬಳಗದಿಂದ ಹಾಸ್ಯ ರಸಾಯನ ಹಾಗೂ ಅಂಕಿತಾ ಕಾಮತ್ ಪಂಗಡದ ಬಾಲಕಲಾವಿದರಿಂದ ‘ವೀರನಾರಿ ಅಹಲ್ಯಾಬಾಯಿ ಹೋಳ್ಕರ್’ ನಾಟಕ ಪ್ರದರ್ಶನಗೊಳ್ಳಲಿದೆ.

ಮೇ 18: ಜಾನಪದ, ಯಕ್ಷಗಾನ ಮತ್ತು ಯುವ ಬರಹಗಾರರ ಚರ್ಚೆ
ದ್ವಿತೀಯ ದಿನವಾದ ಮೇ 18ರ ಸೋಮವಾರ ಬೆಳಿಗ್ಗೆ 9.00 ಗಂಟೆಗೆ ಜಾನಪದ ಗೋಷ್ಠಿಗಳು ನಡೆಯಲಿದ್ದು, ಗೋವಾ ವಿಶ್ವವಿದ್ಯಾಲಯದ ಉಪ ಡೀನ್ ಡಾ. ಪ್ರಕಾಶ್ ಎಸ್. ಪಾರಿಯೆಂಕರ್ ಉದ್ಘಾಟಿಸಲಿದ್ದಾರೆ. ತದನಂತರ ‘ನ್ಯಾನೋ ಕಥೆಗಳ ಪ್ರಸ್ತುತಿ’ ಹಾಗೂ ಹಿರಿಯ ಕಲಾ ವಿಮರ್ಶಕ ಶ್ರೀ ಪ್ರಭಾಕರ ಜೋಶಿ ಅವರ ಅಧ್ಯಕ್ಷತೆಯಲ್ಲಿ ‘ಯಕ್ಷಗಾನ ಕಲೆ ಮತ್ತು ಕೊಂಕಣಿ ಜನರು’ ಎಂಬ ವಿಷಯದ ಕುರಿತು ಚರ್ಚಾಗೋಷ್ಠಿ ನಡೆಯಲಿದೆ. ಮಧ್ಯಾಹ್ನ ಲೋಕಗೀತ ಗಾಯನ ಮತ್ತು ಜಾನಪದ ಗೀತೆಗಳ ವಾಚನ ನಡೆಯಲಿದ್ದು, ಅಪರಾಹ್ನ 2.30ಕ್ಕೆ ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಯುವ ಕೊಂಕಣಿ ಬರಹಗಾರರ ಚರ್ಚಾಗೋಷ್ಠಿ ಆಯೋಜಿತವಾಗಿದೆ.

ಮೇ 18ರ ಸಂಜೆ 3.30ಕ್ಕೆ ಜರುಗಲಿರುವ ಭವ್ಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಶ್ರೀ ಕೆ. ಅರವಿಂದ್ ಕಾಮತ್ ಭಾಗವಹಿಸಲಿದ್ದಾರೆ. ಇದೇ ವೇಳೆ ಹಿರಿಯ ವಕೀಲರಾದ ಕೆ. ಜಗದೀಶ್ ಕಾಮತ್ ಅವರು ‘ಭಾರತದ ಸಂವಿಧಾನದಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ಲಭ್ಯವಿರುವ ಅವಕಾಶಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮಹಾರಾಷ್ಟ್ರ, ಗೋವಾ, ಕೇರಳ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ನೂರಾರು ಮಾತೃಭಾಷಾಭಿಮಾನಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲರಿಗೂ ಸೂಕ್ತ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ರಮೇಶ್ ನಾಯ್ಕ್, ಬಿ.ಆರ್. ಭಟ್, ಮೆಲ್ವಿನ್ ರೋಡ್ರಿಗಸ್, ದೇವದಾಸ್ ಪೈ, ಎಂ.ಆರ್. ಕಾಮತ್ ಹಾಗೂ ಗೋವಿಂದ ರಾಯ ಪ್ರಭು ಉಪಸ್ಥಿತರಿದ್ದರು.